ಸಿಎಎ: ಪ.ಬಂಗಾಳದಲ್ಲಿ ಪ್ರತಿಭಟನೆಗೆ ಗುರಿಯಾದ ಕೇಂದ್ರ ಸಚಿವೆ ಚೌಧುರಿ

ಫೋಟೊ ಕೃಪೆ: twitter. com/DebasreeBJP
ರಾಯಗಂಜ್,ಜ.15: ತನ್ನ ಲೋಕಸಭಾ ಕ್ಷೇತ್ರವಾದ ಪ.ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ರಾಯಗಂಜ್ನಲ್ಲಿ ಬುಧವಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಕೇಂದ್ರದ ಸಹಾಯಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ದೇಬಶ್ರೀ ಚೌಧುರಿ ಅವರು ಜನರಿಂದ ಪ್ರತಿಭಟನೆಯನ್ನು ಎದುರಿಸಬೇಕಾಯಿತು.
ಘಟನೆಯ ಹಿಂದೆ ಟಿಎಂಸಿ ಕಾರ್ಯಕರ್ತರ ಕೈವಾಡವನ್ನು ಚೌಧುರಿ ಆರೋಪಿಸಿದ್ದಾರೆ.
ಸಿಎಎ ಬೆಂಬಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವೆಯ ವಾಹನಗಳ ಸಾಲಿಗೆ ಮುತ್ತಿಗೆ ಹಾಕಿದ ಕೋಪೋದ್ರಿಕ್ತ ಪ್ರತಿಭಟನಾಕಾರರು ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿ,ಅದನ್ನ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು.
ಟಿಎಂಸಿಯ ಕೆಲವು ಕಾರ್ಯಕರ್ತರು ತನ್ನ ಕಾರನ್ನು ಸುತ್ತುವರಿದು ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ತಾನು ಅವರನ್ನು ಸಮಾಧಾನಗೊಳಿಸಿ ಕಾಯ್ದೆಯ ಅಗತ್ಯದ ಬಗ್ಗೆ ಅವರಿಗೆ ತಿಳುವಳಿಕೆ ನೀಡಿದ್ದೇನೆ. ಪ್ರದೇಶದಲ್ಲಿಯ ಜನರನ್ನು ಟಿಎಂಸಿ ದಾರಿ ತಪ್ಪಿಸುತ್ತಿದೆ. ಆದರೆ ಅದು ಖಂಡಿತ ಯಶಸ್ವಿಯಾಗುವುದಿಲ್ಲ ಎಂದು ಚೌಧುರಿ ಹೇಳಿದರು.
ಘಟನೆಯನ್ನು ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದನ್ನು ನಿರಾಕರಿಸಿರುವ ಸ್ಥಳಿಯ ಟಿಎಂಸಿ ಮುಖಂಡರು,ಸಿಎಎ ಮತ್ತು ಎನ್ಆರ್ಸಿ ಕುರಿತು ಬಿಜೆಪಿ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡಿದ್ದಾರೆ ಎಂದಿದ್ದಾರೆ.







