ಸಿಎಎ, ಎನ್ಆರ್ಸಿ ವಿರೋಧಿಸಿ ಉಪವಾಸ ಮುಷ್ಕರ

ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ, ಜ.15: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ವಿರೋಧಿಸಿ ಮುಸ್ಲಿಂ ಮುಖಂಡರು, ದಲಿತ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರು ಹುಬ್ಬಳ್ಳಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಉಪವಾಸ ಮುಷ್ಕರ ನಡೆಸಿದರು.
ಎಐಸಿಸಿ ಸದಸ್ಯ ಶಕೀರ್ ಸನದಿ ಅವರು ಮಾತನಾಡಿ, ಕೇಂದ್ರ ಸರಕಾರ ಸಿಎಎ, ಎನ್ಆರ್ಸಿಯನ್ನು ಜಾರಿಗೆ ತರುವ ಮೂಲಕ ಧರ್ಮ ಹಾಗೂ ಜನರ ನಡುವೆ ಒಡಕನ್ನು ಮೂಡಿಸಲು ಯತ್ನಿಸುತ್ತಿದ್ದು, ಈ ಎರಡು ಜನ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಶಾಂತಿ ಪ್ರಿಯವಾದ ದೇಶದಲ್ಲಿ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದೇವೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಉಪವಾಸ ಮುಷ್ಕರದಲ್ಲಿ ತೊಡಗಿದ್ದ ಪ್ರತಿಯೊಬ್ಬರೂ ಭಿತ್ತಿ ಪತ್ರಗಳನ್ನು ಹಿಡಿದು ಒಕ್ಕೊರಲಿನಿಂದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಈ ಜನ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು. ಈ ವೇಳೆ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಐ.ಜಿ.ಸನದಿ, ಸೈಯದ್ ತಾಜುದ್ದೀನ್ ಖಾದ್ರಿ ಮತ್ತಿತರರು ಉಪವಾಸ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.







