ಎನ್‌ಪಿಆರ್ ವಿರುದ್ಧ ಅಧಿವೇಶನದಲ್ಲಿ ಪ್ರತಿಪಕ್ಷಗಳು ಧ್ವನಿ ಎತ್ತಲಿ : ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್
ಅಡ್ಯಾರ್ ಕಣ್ಣೂರಿನಲ್ಲಿ ಎನ್ ಆರ್ ಸಿ, ಸಿಎಎ ವಿರುದ್ಧ ಪ್ರತಿಭಟನಾ ಸಮಾವೇಶ

ಮಂಗಳೂರು, ಜ.15: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ, ಸಿಎಎಗೆ ಪೂರಕವಾಗಿ ರಾಜ್ಯ ಬಿಜೆಪಿ ಸರಕಾರ ‘ಎನ್‌ಪಿಆರ್’ಗೆ ಸಿದ್ಧತೆ ನಡೆಸುತ್ತಿದೆ. ಇದರ ವಿರುದ್ಧ ಫೆಬ್ರವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಕಾಂಗ್ರೆಸ್-ಜೆಡಿಎಸ್ ಧ್ವನಿ ಎತ್ತಬೇಕು. ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡಬೇಕಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್ ಹೇಳಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗ ದಲ್ಲಿ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಬುಧವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮುಖ್ಯ ಭಾಷಣಗೈದರು.
ಎನ್‌ಪಿಆರ್ ಮಾಡುವುದೇ ಎನ್‌ಆರ್‌ಸಿ ಮಾಡಲು. 2020ರ ಎಪ್ರಿಲ್‌ನಲ್ಲಿ ಎನ್‌ಪಿಆರ್ ನಡೆಸಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕೆ ಅವಕಾಶ ಕೊಡಲೇಬಾರದು. ಎನ್‌ಆರ್‌ಸಿ-ಸಿಎಎಯಿಂದ ಮುಸ್ಲಿಮರಿಗೆ ಮಾತ್ರ ಅಪಾಯ ಎಂಬ ತಪ್ಪು ಕಲ್ಪನೆ ಹಲವರಿಗೆ ಇದೆ. ಅದನ್ನು ಜನಜಾಗೃತಿಯ ಮೂಲಕ ಹೋಗಲಾಡಿಸುವ ಪ್ರಯತ್ನವನ್ನು ಮಾಡಬೇಕಿದೆ. ಸಂಘ ಪರಿವಾರದ ಅನತಿಯಂತೆ ಆಡಳಿತ ನಡೆಸುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಹಿಂದೂ ರಾಷ್ಟ್ರ ನಿರ್ಮಾಣದ ಪಣ ತೊಟ್ಟಿದ್ದಾರೆ. ಇಂತಹ ಚಳುವಳಿಯಿಂದಲೇ ಅದನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ ಎಂದು ಶಿವಸುಂದರ್ ನುಡಿದರು.
ವಂದೇ ಮಾತರಂ ಮತ್ತು ಅಲ್ಲಾಹು ಅಕ್ಬರ್ ಧ್ವನಿ ಮೊಳಗಿಸಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರು ನಾವು. ಆದರೆ ಸ್ವಾತಂತ್ರದ ವಿರುದ್ಧ ಸಂಚು ರೂಪಿಸಿದವರ ಪೀಳಿಗೆಯವರು ದೇಶ ಕಾಯುವ ನೆಪದಲ್ಲಿ ಬಂದು ಮನೆ ಮಾಲಕರಾದ ನಮ್ಮನ್ನೇ ನೀವು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಸುಳ್ಳುಗಳನ್ನೇ ಬಂಡವಾಳವನ್ನಾಗಿಸಿಕೊಂಡ ಮೋದಿ-ಶಾ ಜೋಡಿ ಇಸ್ರೇಲಿನಲ್ಲಿ ಯಹೂದಿಗಳು ಮಾಡಿದಂತೆ ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಲೇ ಬಾರದು ಎಂದ ಶಿವಸುಂದರ್, ಸಂಸತ್ತನ್ನು ತಪ್ಪು ದಾರಿಗೆ ಎಳೆದ ಈ ಜೋಡಿಯ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕಿದೆ ಎಂದರು.
ದೇಶದ 1500 ಜೈಲುಗಳಲ್ಲಿ ಸುಮಾರು 4 ಲಕ್ಷ ಮಂದಿ ಆರೋಪಿ-ಅಪರಾಧಿಗಳಿದ್ದಾರೆ. ಹಾಗಾಗಿ ಪೌರತ್ವ ಕಳಕೊಂಡ ಕೋಟ್ಯಂತರ ಸಂಖ್ಯೆಯ ಜನರನ್ನು ಕೂಡಿ ಹಾಕಲು 2.5 ಲಕ್ಷ ದಿಗ್ಬಂಧನ ಕೇಂದ್ರಗಳ ಅಗತ್ಯವಿದೆ. ದಿನನಿತ್ಯ ಸುಮಾರು 7.5 ಲಕ್ಷ ರೂ. ಖರ್ಚು ಭರಿಸಬೇಕಾಗಿದೆ. ಇದರಿಂದ ಸರಕಾರ ಏನನ್ನು ಸಾಧಿಸಲಿದೆ? ಇದರ ಅಗತ್ಯವಿದೆಯಾ? ಎಂದು ಪ್ರಶ್ನಿಸಿದ ಶಿವಸುಂದರ್, ನಿಮ್ಮದು ರಾಜಕೀಯ ಪಟ್ಟು ಆದರೆ, ನಮ್ಮದು ರಾಜಕೀಯ ಪೆಟ್ಟು ಆಗಿರುತ್ತದೆ. ಸಂಸತ್ತು ನಿಮ್ಮದಾದರೆ, ನಮ್ಮದು ಬೀದಿ ಆಗಿರುತ್ತದೆ. ಚಳುವಳಿಯ ಮೂಲಕ ದೇಶಪ್ರೇಮಿಗಳು ಏನು ಎಂಬುದನ್ನು ತೋರಿಸಿಕೊಡಲಿದ್ದೇವೆ ಎಂದರು.
ಕೇವಲ 200ರಷ್ಟು ಪ್ರತಿಭಟನಾಕಾರರನ್ನು ನಿಭಾಯಿಸಲಾಗದ ಮಂಗಳೂರು ಪೊಲೀಸರು ಇಬ್ಬರು ಅಮಾಯಕರ ಜೀವವನ್ನು ಬಲಿ ಪಡೆದಿದ್ದಾರೆ. ರಕ್ಷಣೆ ಕೊಡಬೇಕಾದ ಪೊಲೀಸರೇ ಹಿಂಸೆಗೆ ಪ್ರಚೋದನೆ ನೀಡಿದ್ದಲ್ಲದೆ, ಘಟನೆ ನಡೆದ ಸ್ಥಳದ ಆಸುಪಾಸಿನ ಸಿಸಿ ಕ್ಯಾಮರಾವನ್ನು ಬಚ್ಚಿಟ್ಟಿದ್ದು ಖಂಡನೀಯ. ಪೊಲೀಸರು ಸಂವಿಧಾನಕ್ಕೆ ಉತ್ತರದಾಯಿತ್ವರಾಗಿರಬೇಕೇ ವಿನಃ ಕಲ್ಲಡ್ಕ ಅಥವಾ ನಾಗಪುರಕ್ಕೆ ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.











