ಹಳೆಯ ವಿಡಿಯೋ ತೋರಿಸಿ 'ಮಂಗಳೂರಿಗೆ ಬಂದ ಕೇರಳದ ಪ್ರತಿಭಟನಾಕಾರರು' ಎಂದ ಖಾಸಗಿ ಚಾನಲ್

ಮಂಗಳೂರು, ಜ.15: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ವಿರೋಧಿಸಿ ನಗರ ಹೊರವಲಯದ ಅಡ್ಯಾರ್-ಕಣ್ಣೂರು ಮೈದಾನದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡೆದಿದ್ದು, ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಆದರೆ ಸಮಾವೇಶಕ್ಕೆ ಆಗಮಿಸಿದ ಪ್ರತಿಭಟನಾಕಾರರ ಬಗ್ಗೆ ಕನ್ನಡ ಖಾಸಗಿ ಸುದ್ದಿ ವಾಹಿನಿಯೊಂದು ತಪ್ಪು ಸುದ್ದಿ ಹಬ್ಬಿಸಿದ್ದು, ಬೋಟ್ ಮೂಲಕ ಕೇರಳದಿಂದ ಮಂಗಳೂರಿಗೆ ಪ್ರತಿಭಟನಾಕಾರರು ಆಗಮಿಸಿದ್ದಾರೆ ಎಂದು ವರದಿ ಮಾಡಿದೆ.
ಇಂದಿನ ಅಡ್ಯಾರ್-ಕಣ್ಣೂರು ಪ್ರತಿಭಟನೆಗೆ ನೂರಾರು ಬೈಕ್, ಕಾರು, ಬಸ್‌ಗಳ ಮೂಲಕ ಪ್ರತಿಭಟನಕಾರರು ಆಗಮಿಸಿದ್ದರು. ಬಿ.ಸಿ.ರೋಡ್, ಪಂಪ್‌ವೆಲ್, ನಂತೂರು, ಉಳ್ಳಾಲ ಕಡೆಯಿಂದ ಅಡ್ಯಾರ್‌ನತ್ತ ವಾಹನಗಳಲ್ಲಿ ಜನಸಾಗರವೇ ಹರಿದು ಬಂದಿತ್ತು. ಜೊತೆಗೆ ಬೋಟ್ ಗಳ ಮೂಲಕವೂ ಪ್ರತಿಭಟನಾಕಾರರು ಬಂದಿದ್ದು, ನೇತ್ರಾವತಿ ನದಿಯಲ್ಲಿ ಆಝಾದಿ ಘೋಷಣೆ ಕೂಗುತ್ತಾ ಸಮಾವೇಶಕ್ಕೆ ಬರುತ್ತಿದ್ದರು.
ಮಂಗಳೂರು ನಗರದ ಪಕ್ಕದಲ್ಲಿರುವ ಪಾವೂರು, ಹರೇಕಳ ಕಡವಿನ ಬಳಿಯಿಂದ ಮತ್ತು ಬೆಂಗ್ರೆಯಿಂದ ಅಳಿವೆ ಬಾಗಿಲು ಮಾರ್ಗವಾಗಿ ಹಾಗೂ ಉಳ್ಳಾಲ ಕೋಟೆಪುರದಿಂದ ನೇತ್ರಾವತಿ ನದಿಯ ಮೂಲಕ ಸುಮಾರು 200ಕ್ಕೂ ಹೆಚ್ಚು ದೋಣಿಗಳಲ್ಲಿ ಸಾವಿರಾರು ಪ್ರತಿಭಟನಕಾರರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಝಾದಿ ಘೋಷಣೆ ಕೂಗುತ್ತಿದ್ದರು. ಆದರೆ ಕೇರಳದ ಹಳೆಯ ವಿಡಿಯೋ ತೋರಿಸಿದ 'ಸುವರ್ಣ ನ್ಯೂಸ್' ಸುದ್ದಿ ವಾಹಿನಿ ಪ್ರತಿಭಟನಾಕಾರರು ಕೇರಳದಿಂದ ಬೋಟ್ ಮೂಲಕ ಬರುತ್ತಿದ್ದಾರೆ ಎಂದು ವರದಿ ಮಾಡಿದೆ.
ಈಗಾಗಲೇ ಮಂಗಳೂರಿನಲ್ಲಿ ಡಿ.19 ರಂದು ನಡೆದ ಘಟನೆಗೆ ಕೇರಳದಿಂದ ಬಂದಿದ್ದ ದುಷ್ಕರ್ಮಿಗಳು ಕಾರಣ ಎಂದು ಕೆಲವು ರಾಜಕಾರಣಿಗಳು ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಆದರೆ ಪೊಲೀಸರು ದಾಖಲಿಸಿದ ಯಾವುದೇ ವರದಿಯಲ್ಲಿ ಕೇರಳದಿಂದ ಬಂದವರ ಉಲ್ಲೇಖವಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್ ನ ಬುಧವಾರದ 'ಕೇರಳದ ಬೋಟ್' ಸುದ್ದಿ ಗೊಂದಲಕ್ಕೆ ಹಾಗೂ ಜನರ ಅಸಮಾಧಾನಕ್ಕೆ ಕಾರಣವಾಯಿತು.
ಇದೇ ವಿಡಿಯೋವನ್ನು Ndtv ಕೂಡಾ ವರದಿ ಮಾಡಿದ್ದು, ಆದರೆ ಪ್ರತಿಭಟನಾಕಾರರು ಕೇರಳದಿಂದ ಬರುತ್ತಿದ್ದರು ಎಂದು ವರದಿಯಲ್ಲಿ ತಿಳಿಸಿಲ್ಲ.







