ಭಾರತ ನಿರ್ಣಾಯಕ ಪಾತ್ರ ವಹಿಸಲು ಸಿದ್ಧವಾಗಿದೆ: ಎಸ್. ಜೈಶಂಕರ್

ಹೊಸದಿಲ್ಲಿ, ಜ.15: ಭಾರತ ಎಂದಿಗೂ ಒಡಕುಂಟು ಮಾಡುವುದಿಲ್ಲ ಮತ್ತು ನಿರ್ಣಾಯಕ ಪಾತ್ರ ವಹಿಸಲು ಸಿದ್ಧವಾಗಿದೆ ಎಂದು ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ನಾವು ಗತಕಾಲದ ಇಮೇಜ್‌ನಿಂದ ಹೊರಬರಬೇಕಿದೆ. ಈ ಹಿಂದೆ ನಾವು ಮಾಡಿದ್ದಕ್ಕಿಂತ ಹೆಚ್ಚು ಮಾತನಾಡಿದ್ದೇವೆ. ಆದರೆ ಈಗ ಕಾಲ ಬದಲಾಗುತ್ತಿದೆ. ನಾವು ನಿರ್ಣಾಯಕ ಪಾತ್ರ ವಹಿಸಲು ಸಿದ್ಧವಾಗಿದ್ದೇವೆ. ಸಮಸ್ಯೆ ಎದುರಾದರೆ ಅದರಿಂದ ವಿಮುಖವಾಗದೆ ಎದುರಿಸಲು ಬದ್ಧವಾಗಿದ್ದೇವೆ ಎಂದವರು ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆದ ರೈಸಿನಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಉಲ್ಲೇಖಿಸಿದ ಜೈಶಂಕರ್, ಇವೆರಡೂ ಸ್ವತಂತ್ರ ರಾಷ್ಟ್ರಗಳಾಗಿದ್ದು ಅಂತಿಮ ಬೆಳವಣಿಗೆ ಈ ಎರಡು ರಾಷ್ಟ್ರಗಳ ವರ್ತನೆಯನ್ನು ಅವಲಂಬಿಸಿದೆ ಎಂದರು.
ಚೀನಾ-ಭಾರತ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವು ಮಹತ್ವದ ವಿಷಯಗಳಲ್ಲಿ ನೆರೆಹೊರೆಯ ರಾಷ್ಟ್ರಗಳು ಸಹಮತಕ್ಕೆ ಬರುವ ಅಗತ್ಯವಿದೆ . ಎರಡೂ ರಾಷ್ಟ್ರಗಳ ಮಧ್ಯೆ ಸಮತೋಲನದ ಸಂಬಂಧವಿದೆ. ಎರಡೂ ರಾಷ್ಟ್ರಗಳು ಜತೆಯಾಗಿಯೇ ಮುಂದೆ ಸಾಗಬೇಕಿದೆ ಎಂದು ಹೇಳಿದರು. ಭಾರತವು ನಿಷ್ಪಕ್ಷಪಾತ ದೇಶವಾಗಿರುವ ಬದ್ಧತೆಯನ್ನು ಹೊಂದಿದೆ. ಭಾರತವು ಒಡಕುಂಟು ಮಾಡುವ ದೇಶವಲ್ಲ ಮತ್ತು ಭಯೋತ್ಪಾದಕತೆಯ ವಿರುದ್ಧ ಕ್ರಮ ಕೈಗೊಳ್ಳಲು ದೃಢ ಸಂಕಲ್ಪ ಮಾಡಿದೆ ಎಂದು ಜೈಶಂಕರ್ ಹೇಳಿದ್ದಾರೆ.





