ಎನ್‌ಆರ್‌ಸಿ, ಸಿಎಎ ಪರ ಅಮಿತ್ ಶಾರ ಪ್ರಚಾರ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಸಂವಿಧಾನ ಸಂರಕ್ಷಣಾ ಸಮಿತಿ ಮನವಿ

ಹುಬ್ಬಳ್ಳಿ, ಜ.16: ಹುಬ್ಬಳ್ಳಿಯಲ್ಲಿ ಜ.18ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಎನ್‌ಆರ್‌ಸಿ, ಸಿಎಎ ಪರ ಪ್ರಚಾರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಸಂವಿಧಾನ ಸಂರಕ್ಷಣಾ ಸಮಿತಿಯು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ದೇಶಾದ್ಯಂತ ಸಿಎಎ ಮತ್ತು ಎನ್‌ಆರ್‌ಸಿಗೆ ವ್ಯಾಪಕ ವಿರೋಧವಿರುವಾಗ ಜ.18ರಂದು ಹುಬ್ಬಳ್ಳಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಎ ಮತ್ತು ಎನ್‌ಆರ್‌ಸಿ ಪರವಾಗಿ ಪ್ರಚಾರ ಕಾರ್ಯಕ್ರಮ ನಡೆಸಿದರೆ ಅದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಲಿದೆ. ಈ ಹಿಂದೆ ಈದ್ಗಾ ಮೈದಾನ, ರಾಮ ಮಂದಿರ ಮುಂತಾದ ಧಾರ್ಮಿಕ ವಿಚಾರಗಳಿಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ತತ್ತರಿಸಿ ಹಲವು ದಿನಗಳ ಕಾಲ ಆತಂಕ ಅಶಾಂತಿಯ ಪರಿಸ್ಥಿತಿ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಅಂತಹ ಆತಂಕಕಾರಿ ವಾತಾವರಣ ಮರುಕಳಿಸಬಾರದು. ಅದಲ್ಲದೆ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಈ ಹಿಂದೆ ಬೇರೆ ಬೇರೆ ವಿಷಯಗಳಲ್ಲಿ ವಿವಿಧ ಸಂಘಟನೆಗಳು ತಮ್ಮ ವಿಭಾಗದ ಜನತೆಯ ಬೇಡಿಕೆಗಳಿಗಾಗಿ ನಡೆಸಲುದ್ದೇಶಿಸಿದ್ದ ಮೆರವಣಿಗೆಗಳಿಗೆ ಅನುಮತಿ ನೀಡಿದ್ದರೂ ಬಳಿಕ ಹಿಂಪಡೆಯಲಾಗಿತ್ತು. ಇದಕ್ಕೆ ಪೊಲೀಸ್ ಇಲಾಖೆ ನಗರದಲ್ಲಿ ಸಂದಿಗ್ಧ ಪರಿಸ್ಥಿತಿ ಇದೆ. ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಸಂಚಾರ ತೊಂದರೆ ಇರುವ ಕಾರಣವನ್ನು ನೀಡಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿ ಇರುವುದಾದರೆ ಅಮಿತ್ ಶಾ ಅವರ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.





