ಪ್ರತಿಮೆಗಳಿಗಾಗಿ ಸರಕಾರದ ಬಳಿ ಹಣವಿದೆ, ಜನರ ಆರೋಗ್ಯಕ್ಕಾಗಿ ಇಲ್ಲ: ಹೈಕೋರ್ಟ್

ಮುಂಬೈ,ಜ.16: ವಾಡಿಯಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ಅನುದಾನ ನೀಡುವಲ್ಲಿ ವಿಳಂಬಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ಗುರುವಾರ ತೀವ್ರ ತರಾಟೆಗೆತ್ತಿಕೊಂಡ ಬಾಂಬೆ ಉಚ್ಚ ನ್ಯಾಯಾಲಯವು,ಸರಕಾರದ ಬಳಿ ಪ್ರತಿಮೆಗಳ ನಿರ್ಮಾಣಕ್ಕಾಗಿ ಹಣವಿದೆ,ಆದರೆ ಸಾರ್ವಜನಿಕರ ಆರೋಗ್ಯಕ್ಕಾಗಿ ಇಲ್ಲ ಎಂದು ಹೇಳಿತು.
ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮತ್ತು ರಾಜ್ಯ ಸರಕಾರದಿಂದ ಅನುಕ್ರಮವಾಗಿ ಬಾಯಿ ಜೇರಬಾಯಿ ವಾಡಿಯಾ ಮಕ್ಕಳ ಆಸ್ಪತ್ರೆ ಹಾಗೂ ನವರೋಸ್ಜಿ ವಾಡಿಯಾ ಹೆರಿಗೆ ಆಸ್ಪತ್ರೆಗಳಿಗೆ ಅನುದಾನ ಬಿಡುಗಡೆಯನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ಆರ್.ಐ.ಛಗ್ಲಾ ಅವರ ವಿಭಾಗೀಯ ಪೀಠವು ಕೈಗೆತ್ತಿಕೊಂಡಿತ್ತು.
ವಿತ್ತ ಸಚಿವಾಲಯವು 24 ಕೋ.ಮಂಜೂರು ಮಾಡಿದ್ದು,ಮೂರು ವಾರಗಳಲ್ಲಿ ವಾಡಿಯಾ ಹೆರಿಗೆ ಆಸ್ಪತ್ರೆಗೆ ಬಿಡುಗಡೆಗೊಳ್ಳಲಿದೆ ಎಂದು ಸರಕಾರಿ ವಕೀಲ ಗಿರೀಶ ಗೋಡಬೋಲೆ ತಿಳಿಸಿದರಾದರೂ,ಅದಕ್ಕೊಪ್ಪದ ಪೀಠವು ಶುಕ್ರವಾರವೇ ಹಣವನ್ನು ಬಿಡುಗಡೆಗೊಳಿಸುವಂತೆ ಸೂಚಿಸಿತು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗಿಂತ ಎತ್ತರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಸರಕಾರವು ಮುಂದಾಗಿದೆ. ಇವೆಲ್ಲದಕ್ಕೆ ಅದರ ಬಳಿ ಹಣವಿದೆ,ಆದರೆ ಅಂಬೇಡ್ಕರ್ ಅವರು ತನ್ನ ಜೀವನಪರ್ಯಂತ ಪ್ರತಿನಿಧಿಸಿದ್ದ ಜನರು ಸಾಯಬೇಕೇ? ಜನರಿಗೆ ಕಾಯಿಲೆಗಳಿಂದ ಗುಣಮುಖರಾಗಲು ವೈದ್ಯಕೀಯ ನೆರವು ಬೇಕೇ ಅಥವಾ ಪ್ರತಿಮೆಗಳೇ ಎಂದು ನ್ಯಾ.ಧರ್ಮಾಧಿಕಾರಿ ಪ್ರಶ್ನಿಸಿದರು.
ಸಾರ್ವಜನಿಕ ಆರೋಗ್ಯವು ಎಂದೂ ಸರಕಾರದ ಆದ್ಯತೆಯಾಗಿರಲಿಲ್ಲ ಎಂದ ಪೀಠವು ‘ಮುಖ್ಯಮಂತ್ರಿಗಳು ಸೇತುವೆಗಳ ಉದ್ಘಾಟನೆಯಲ್ಲಿ ವ್ಯಸ್ತರಾಗಿದ್ದಾರೆ. ಹೊಸ ಸರಕಾರವು ಬಂದಿದೆ ಮತ್ತು ಈ ಎಲ್ಲ ವಿಷಯಗಳು ನಮ್ಮ ಬಳಿ ಬರುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಇದೇಕೋ ಸರಿಹೋಗಿಲ್ಲ ’ಎಂದೂ ಹೇಳಿತು.
ವಾಡಿಯಾ ಮಕ್ಕಳ ಆಸ್ಪತ್ರೆಗೆ 14 ಕೋ.ರೂ.ಗಳನ್ನು ಬಿಡುಗಡೆಗೊಳಿಸುವುದಾಗಿ ಬಿಎಂಸಿ ನ್ಯಾಯಾಲಯಕ್ಕೆ ತಿಳಿಸಿತು.
ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು,ಮಂಜೂರಾಗಿರುವ ಹಣವನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂದು ಸರಕಾರವು ಅಂದು ತಿಳಿಸಬೇಕಿದೆ.







