ರಕ್ತದಾನಿಗಳೇ ನಿಜವಾದ ರಕ್ತ ಸಂಬಂಧಿಗಳು: ಡಾ.ಮಹೇಶ್ ಭಟ್

ಉಡುಪಿ, ಜ.16: ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಉಡುಪಿ ಜಿಲ್ಲಾ ನಾಗರಿಕ ಸೇವಾ ಟ್ರಸ್ಟ್ ಮತ್ತು ಮಣಿಪಾಲ ಕೆಎಂಸಿ ಬ್ಲಡ್‌ಬ್ಯಾಂಕಿನ ಸಹಯೋಗದೊಂದಿಗೆ ರಕ್ತದಾನ ಶಿಬಿರ ಇಂದು ಸಂಸ್ಕೃತ ಕಾಲೇಜಿ ಭೀಮ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ಲಕ್ಷ್ಮೀನಾರಾಯಣ ಭಟ್ ಮಾತನಾಡಿ, ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ಮಾಡುವುದು ಸಾತ್ತ್ವಿಕ, ಬೇರೆಯವರಿಂದ ಅಪೇಕ್ಷೆ ಪಟ್ಟು ಸೇವೆ ಮಾಡುವುದು ರಾಜಸ, ಸೇವೆಯ ನೆಪದಲ್ಲಿ ಅವರನ್ನೇ ನುಂಗುವುದು ತಾಮಸ. ನಾವು ಯಾವತ್ತೂ ಸಾತ್ತ್ವಿಕ ಸೇವೆ ಮಾಡಬೇಕು ಎಂದು ಹೇಳಿದರು.
ಆಲಸ್ಯ ಒಂದು ಬಾರಿ ಶರೀರವನ್ನು ಪ್ರವೇಶಿಸಿದರೆ ಮತ್ತೆ ಬಿಟ್ಟು ಹೋಗು ವುದಿಲ್ಲ. ಆದ್ದರಿಂದ ಉತ್ಸಾಹದಿಂದ ಪ್ರತಿಫಲ ಅಪೇಕ್ಷೆಯಿಲ್ಲದೆ ಸೇವೆ ಮಾಡ ಬೇಕು. ವೃದ್ಧರಾದವರಿಗೆ ಮತ್ತು ಬಾಲಕರಿಗೆ ರಕ್ತದಾನ ಮಾಡುವ ಸಾಮರ್ಥ್ಯ ಇರುವುದಿಲ್ಲ. ಆದ್ದರಿಂದ ಯುವಕರು ನಿಷ್ಕಾಮವಾಗಿ ರಕ್ತದಾನ ಮಾಡಬೇಕು ಎಂದು ಅವರು ತಿಳಿಸಿದರು.
ಕನ್ನಡ ಪ್ರಾಧ್ಯಾಪಕಿ ಡಾ.ಭಾಗ್ಯಲಕ್ಷ್ಮೀ ಮಾತನಾಡಿ, ಅನ್ನದಾನ, ವಿದ್ಯಾದಾನ ಎಲ್ಲ ಸಾರ್ಥಕವಾಗಬೇಕಾದರೆ ಆರೋಗ್ಯ ಬಹಳ ಮುಖ್ಯ. ರಕ್ತ ಯಾರಿಗೆ ಕೊರತೆ ಇದೆಯೋ ಅವರಿಗೆ ರಕ್ತ ಇರುವವರು ದಾನ ಮಾಡುವ ಮೂಲಕ ಅವರಿಗೆ ಜೀವದಾನ ಮಾಡುವಂತಹ ಶ್ರೇಷ್ಠವಾದ ದಾನ ರಕ್ತದಾನ ಎಂದು ಅಭಿಪ್ರಾಯಪಟ್ಟರು.
ಅಲಂಕಾರ ಪ್ರಾಧ್ಯಾಪಕ ಡಾ.ಮಹೇಶ ಭಟ್ ಮಾತನಾಡಿ, ರಕ್ತದಾನ ಮಾಡುವವರೇ ನಿಜವಾದ ರಕ್ತ ಸಂಬಂಧಿಗಳು ಎಂದು ತಿಳಿಸಿದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯ ಡಾ.ಅಶ್ವಿನ್ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಮಲಬಾರ್ ಗೋಲ್ಡ್ ಮ್ಯಾನೇಜರ್ ರಾಘವೇಂದ್ರ ನಾಯಕ್, ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸಂಯೋಜನಾಧಿಕಾರಿ ವಿದ್ವಾನ್ ರಾಧಾಕೃಷ್ಣ ಸ್ವಾಗತಿಸಿದರು. ಪಾಂಡುರಂಗ ಜೋಷಿ ವಂದಿಸಿದರು. ಅರವಿಂದ ಭಟ್ ಕಾರ್ಯಕ್ರಮ ನಿರೂಪಿಸಿದರು.







