ಪರ್ಯಾಯ ಮಹೋತ್ಸವ: ಭದ್ರತೆಗಾಗಿ 1110 ಪೊಲೀಸರ ನಿಯೋಜನೆ
ಉಡುಪಿ, ಜ.16: ಉಡುಪಿ ಶ್ರೀಕೃಷ್ಣ ಮಠದಲ್ಲಿ ಜ.17 ಮತ್ತು 18ರಂದು ನಡೆಯುವ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪರ್ಯಾಯಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಹಾಗೂ ಇತರ ಕೇಂದ್ರ ಮಂತ್ರಿಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಸೂಕ್ಷ್ಮತೆಯನ್ನು ಪರಿಗಣಿಸಿ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಕರ್ತವ್ಯಕ್ಕೆ ಒಬ್ಬರು ಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, ಎಂಟು ಡಿವೈಎಸ್ಪಿ, 23 ಪೊಲೀಸ್ ನಿರೀಕ್ಷಕರು, 65 ಎಸ್ಸೈಗಳು, 193 ಎಎಸ್ಸೈಗಳು, 289 ಹೆಡ್‌ಕಾನ್‌ಸ್ಟೇಬಲ್ ಹಾಗೂ 530 ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನೇಮಿಸಲಾಗಿದೆ.
ಹೀಗೆ ಒಟ್ಟು 1110 ಅಧಿಕಾರಿ/ಸಿಬ್ಬಂದಿಯವರನ್ನು ಹಾಗೂ 300 ಗೃಹರಕ್ಷಕ ಸಿಬ್ಬಂದಿಯವರನ್ನು ಕರ್ತವ್ಯಕ್ಕೆ ನಿಯುಕ್ತಿ ಗೊಳಿಸಲಾಗಿದೆ. ಅಲ್ಲದೆ 04 ಕೆಎಸ್ ಆರ್‌ಪಿ, 10 ಡಿಎಆರ್, 5 ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ನಿಯೋಜಿಸ ಲಾಗಿದೆ. ಶ್ರೀಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಮತ್ತು ಸರ್ವಿಸ್ ಬಸ್ ನಿಲ್ದಾಣದ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಡ್ರೋನ್ ಹಾರಾಟ ನಿಷೇಧ
ಉಡುಪಿ ನಗರದ ಒಟ್ಟು 4 ಆಯಕಟ್ಟಿನ ಸ್ಥಳಗಳಲ್ಲಿ(ಅಂಬಾಗಿಲು, ಇಂದ್ರಾಳಿ, ಕುಕ್ಕಿಕಟ್ಟೆ. ಬಲಾಯಿಪಾದೆ ಕ್ರಾಸ್) ಚೆಕ್ ಪೋಸ್ಟ್‌ಗಳನ್ನು ತೆರೆಯ ಲಾಗಿದ್ದು, ಇಲ್ಲಿ ದಿನದ 24 ಗಂಟೆಗಳ ಕಾಲವೂ ಸೂಕ್ತ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಪರ್ಯಾಯ ಮಹೋತ್ಸವದಲ್ಲಿ ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.







