ಪರ್ಯಾಯ ಮಹೋತ್ಸವ: ನಗರ ಸಂಚಾರ ಮಾರ್ಗದಲ್ಲಿ ಬದಲಾವಣೆ
ಉಡುಪಿ, ಜ.16: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಿತದೃಷ್ಠಿಯಿಂದ ಜ.17ರ ಮಧ್ಯಾಹ್ನ 2 ಗಂಟೆಯಿಂದ ಜ.18ರ ಬೆಳಗ್ಗೆ 7 ಗಂಟೆಯವರೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿದ್ದು, ಅದರ ಬದಲಿಗೆ ಪರ್ಯಾಯ ರಸ್ತೆ ಸಂಚಾರ ಮಾರ್ಗವನ್ನು ಸೂಚಿಸಿ ಉಡುಪಿ ಜಿಲ್ಲಾಡಳಿತ ಆದೇಶ ನೀಡಿದೆ.
ಜ.17ರ ಸಂಜೆ 7 ಗಂಟೆಯವರೆಗೆ ಮಂಗಳೂರು, ಬಲಾಯಿಪಾದೆ, ಅಂಬಲಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮೂಲಕ ರಾಹೆ 66ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಕುಂದಾಪುರ ಬ್ರಹ್ಮಾವರ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ರಾಹೆ-66ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗ ವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು.
ಉಡುಪಿ ನಗರಕ್ಕೆ ಸಂಜೆ 7 ಗಂಟೆಯ ನಂತರ ಎಲ್ಲಾ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಸಂಜೆ 7 ಗಂಟೆಯ ನಂತರ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಮಂಗಳೂರು/ಕುಂದಾಪುರ ಕಡೆಗೆ ಹೋಗಬೇಕು. ಮಣಿಪಾಲಕ್ಕೆ ಹೋಗುವ ವಾಹನಗಳು ಅಂಬಾಗಿಲು ಮೂಲಕ ಪೆರಂಪಳ್ಳಿ ರಸ್ತೆಯಿಂದಾಗಿ ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಾಲ, ಕಾರ್ಕಳ ಕಡೆಗೆ ಹೋಗಬೇಕು
ಜ.17ರ ಸಂಜೆ 7ಗಂಟೆವರೆಗೆ ಕಾರ್ಕಳ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7 ಗಂಟೆಯ ನಂತರ ಮಿಷನ್ ಕಂಪೌಂಡ್ ರಸ್ತೆ ಅಂತಿಮ ನಿಲುಗಡೆಯಾಗಿದ್ದು, ಅಲಿ್ಲಂದಲೇ ವಾಪಾಸು ಹಿಂದಿರುಗಬೇಕು.
ಸಂಜೆ 7ಗಂಟೆಯವರೆಗೆ ಕಾರ್ಕಳ - ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವೀಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7 ಗಂಟೆಯ ನಂತರ ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಕಾಯಿನ್ ಸರ್ಕಲ್- ಪೆರಂಪಳ್ಳಿ ಅಂಬಾಗಿಲು ಮಾರ್ಗವಾಗಿ ಕರಾವಳಿ ಜಂಕ್ಷನ್ ಆಗಮಿಸಬೇಕು. ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಅಂಬಾಗಿಲು- ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲ -ಕಾರ್ಕಳ ಕಡೆಗೆ ಹೋಗಬೇಕು.
ಜ.17ರ ಮಧ್ಯಾಹ್ನ 2 ಗಂಟೆಯಿಂದ ಜ.18ರ ಬೆಳಿಗ್ಗೆ 7ಗಂಟೆಯವರೆಗೆ ಮಂಗಳೂರಿನಿಂದ ಮುಂಬೈ ಹೋಗುವ ಎಲ್ಲ ಬಸ್‌ಗಳು ಕರಾವಳಿ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನೇರವಾಗಿ ಸಂತೆಕಟ್ಟೆ ಮಾರ್ಗವಾಗಿ ಮುಂಬೈ ಕಡೆಗೆ ತೆರಳಬೇಕು. ಜ.17ರ ಸಂಜೆ 6 ಗಂಟೆಯವರೆಗೆ ಮಲ್ಪೆ -ಆದಿಉಡುಪಿ-ಕರಾವಳಿ ಜಂಕ್ಷನ್-ಬನ್ನಂಜೆ ಮಾರ್ಗವಾಗಿ ಉಡುಪಿ ನಗರಕ್ಕೆ ಪ್ರವೇಶಿಸಬೇಕು. ಸಂಜೆ 7 ಗಂಟೆಯ ನಂತರ ಮಲ್ಪೆಕಡೆಯಿಂದ ಬರುವ ಎಲ್ಲ ವಾಹನಗಳು ಆದಿ ಉಡುಪಿ ಜಂಕ್ಷನ್‌ವರೆಗೆ ಆಗಮಿಸಿ ನಂತರ ವಾಪಾಸು ಅದೇ ಮಾರ್ಗದಲ್ಲಿ ಮಲ್ಪೆಕಡೆಗೆ ಹಿಂತಿರುಗಬೇಕು. ಮಂಗಳೂರು -ಕುಂದಾ ಪುರ ಕಡೆಗೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮೂಲಕ ಹಾದು ಹೋಗಬೇಕು.
ಜ.17ರ ಮಧ್ಯಾಹ್ನ 2 ಗಂಟೆಯಿಂದ ಜ.18ರಂದು ಬೆಳಿಗ್ಗೆ 7 ಗಂಟೆಯ ವರೆಗೆ ನಗರದ ಕಿನ್ನಿಮೂಲ್ಕಿ - ಜೋಡುಕಟ್ಟೆ - ಲಯನ್ ಸರ್ಕಲ್ - ಕೋಟರ್ ರಸ್ತೆ, ಡಯಾನ ಜಂಕ್ಷನ್, ಕೆ.ಎಂ.ಮಾರ್ಗ, ಹನುಮಾನ್ ಸರ್ಕಲ್, ಸಂಸ್ಕೃತ ಕಾಲೇಜು ಜಂಕ್ಷನ್, ಕನಕದಾಸ ರಸ್ತೆ, ಬಡಗುಪೇಟೆ ರಸ್ತೆ, ಚಿತ್ತರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆ ರಸ್ತೆ, ತೆಂಕುಪೇಟೆ, ಎಲ್ವಿಟಿ ತೆಂಕಪೇಟೆ ದೇವಸ್ಥಾನದ ರಸ್ತೆ, ಹರಿಶ್ಚಂದ್ರ ಮಾರ್ಗದಿಂದ ವಿದ್ಯೋದಯ ಶಾಲೆಯವರೆಗೆ, ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ, ಕಟ್ಟೆ ಆಚಾರ್ಯ ಮಾರ್ಗ ಮತ್ತು ರಥಬೀದಿಗಳಲ್ಲಿ ಎಲ್ಲ ವಾಹನಗಳ ಪ್ರವೇಶ ಮತ್ತು ನಿಲುಗಡೆ ಯನ್ನು ನಿಷೇಧಿಸಲಾಗಿದೆ.
ಪೇಜಾವರ ಮಠದ ಹಿಂಭಾಗದಲ್ಲಿ ಲಘು ಹಾಗೂ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿದ್ದು, ವುಡ್‌ಲ್ಯಾಂಡ್ ಹೋಟೇಲ್‌ನಿಂದ ಪೇಜಾವರ ಮಠದ ಹಿಂಭಾಗದವರೆಗೆ ಜ.20ರವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅಲ್ಲದೇ ಜ.17ರ ಬೆಳಿಗ್ಗೆ 9 ಗಂಟೆಯಿಂದ ಜ.18ರ ಸಂಜೆ 6 ಗಂಟೆಯವರೆಗೆ ಹೆಚ್ಚುವರಿಯಾಗಿ ಸ್ವಾಗತ ಗೋಪುರ, ಕಿನ್ನಿಮುಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ ಲಯನ್ಸ್ ಸರ್ಕಲ್, ಡಯಾನ ಸರ್ಕಲ್, ಮಿತ್ರ ಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕಪೇಟೆ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈ ನಿಷೇಧವು ಗಣ್ಯರ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
15 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ
ಪರ್ಯಾಯ ಮಹೋತ್ಸವಕ್ಕೆ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಆಗಮಿಸುವ ವಾಹನಗಳಿಗೆ ಅನುಕೂಲವಾಗಲು ಉಡುಪಿ ನಗರದ 15 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಆವರಣ, ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಆವರಣದ ಎಡಭಾಗ, ಅಜ್ಜರಕಾಡು ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜರಕಾಡು ಭುಜಂಗ ಪಾರ್ಕ್ ಪಕ್ಕದ ರಸ್ತೆ, ಕಿತ್ತೂರು ಚೆನ್ನಮ್ಮ ಕ್ರಾಸ್ ರಸ್ತೆಯ ಇಕ್ಕೆಲಗಳಲ್ಲಿ(ಜಿಟಿಎಸ್ ಶಾಲೆ ರಸ್ತೆ), ಸೈಂಟ್ ಸಿಸಿಲಿಸ್ ಸ್ಕೂಲ್ ಮೈದಾನ, ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಬೋರ್ಡ್ ಶಾಲೆ, ಕಲ್ಸಂಕ ಗುಂಡಿಬೈಲು ರಸ್ತೆಯ ಎಡ ಬದಿ ಖಾಲಿ ಸ್ಥಳ, ಬೀಡಿನಗುಡ್ಡೆ ಮೈದಾನ, ಕುಂಜಿಬೆಟ್ಟು ಎಂಜಿಎಂ ಕಾಲೇಜು ಕ್ರೀಡಾಂಗಣ, ರಾಜಾಂಗಣ ಪಾರ್ಕಿಂಗ್ ಸ್ಥಳ, ತೆಂಕಪೇಟೆ ಎಲ್ವಿಟಿ ನಾಗಬನ ಬಳಿ, ಪಿಪಿಸಿ ಕಾಲೇಜು ಆವರಣ, ಅಮ್ಮಣ್ಣಿ ರಾಮಣ್ಣ ಹಾಲ್ ಮೈದಾನ, ಪುರಭವನ ಆವರಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.







