1993 ಮುಂಬೈ ಸರಣಿ ಸ್ಪೋಟ ಪ್ರಕರಣ: ನಾಪತ್ತೆಯಾಗಿದ್ದ ದೋಷಿ ಜಲೀಸ್ ಅನ್ಸಾರಿ ಬಂಧನ

ಮುಂಬೈ, ಜ. 17: ಪರೋಲ್‌ನಲ್ಲಿದ್ದು ಗುರುವಾರ ನಾಪತ್ತೆಯಾಗಿದ್ದ 1993 ಮುಂಬೈ ಸರಣಿ ಸ್ಫೋಟ ಪ್ರಕರಣದ ದೋಷಿ 68 ವರ್ಷದ ಜಲೀಸ್ ಅನ್ಸಾರಿಯನ್ನು ಉತ್ತರಪ್ರದೇಶದ ಕಾನ್ಪುರದಿಂದ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆ ಬಂಧಿಸುವಾಗ ಡಾ. ಬಾಂಬ್ ಎಂದು ಕರೆಯಲಾಗುವ ಅನ್ಸಾರಿ ನಗರದ ಮಸೀದಿಯಿಂದ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದ. ಅನ್ಸಾರಿಯನ್ನು ಲಕ್ನೋಗೆ ಕರೆದೊಯ್ಯಲಾಗಿದೆ. ಇದು ಉತ್ತರಪ್ರದೇಶ ಪೊಲೀಸರ ಅತಿ ದೊಡ್ಡ ಸಾಧನೆ ಎಂದು ಉತ್ತರಪ್ರದೇಶ ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಮೂಲತಃ ಉತ್ತರಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ನಿವಾಸಿಯಾಗಿರುವ ಅನ್ಸಾರಿ ಎಂಬಿಬಿಎಸ್ ಪದವೀಧರ. ಈತ ನೇಪಾಳ ದಾರಿಯ ಮೂಲಕ ದೇಶ ತ್ಯಜಿಸಲು ಪ್ರಯತ್ನಿಸುತ್ತಿದ್ದ. ಹಿರಿಯ ಎಸ್‌ಟಿಎಫ್ ಅಧಿಕಾರಿಗೆ ಅನಾಮಿಕನೋರ್ವ ನೀಡಿದ ಮಾಹಿತಿಯಂತೆ ಅನ್ಸಾರಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ನಡೆದ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಅನ್ಸಾರಿಯನ್ನು ದೋಷಿ ಎಂದು ಪರಿಗಣಿಸಲಾಗಿದೆ. ರಾಜಸ್ಥಾನದ ಅಜ್ಮೀರ್ ಕೇಂದ್ರ ಕಾರಾಗೃಹದಿಂದ 21 ದಿನಗಳ ಪರೋಲ್‌ನಲ್ಲಿ ಹೊರಗೆ ಬಂದಿದ್ದ ಅನ್ಸಾರಿ ಗುರುವಾರ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ಪುತ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ.





