ಪಿಎಸ್ಸೈ ಹುದ್ದೆಗಳಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು, ಜ.20: ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್ಸೈ) ಹುದ್ದೆಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸುವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 90 ದಿನಗಳ ಉಚಿತ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮುಸ್ಲಿಮ್, ಜೈನ್, ಕ್ರೈಸ್ತ, ಬೌದ್ಧ, ಸಿಖ್ ಹಾಗೂ ಪಾರ್ಸಿ ಧರ್ಮಕ್ಕೆ ಸೇರಿದ ಅಭ್ಯರ್ಥಿಗಳು ವೆಬ್‌ಸೈಟ್ https://gokdom.kar.nic.in ಗೆ ಭೇಟಿ ನೀಡಿ ಜನವರಿ 31ರೊಳಗಾಗಿ ಅರ್ಜಿ ಸಲ್ಲಿಸಿ, ಅದರ ಪ್ರಿಂಟ್ ಔಟ್ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಅರ್ಹತೆಗಳು: ಯಾವುದಾದರೂ ಒಂದು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಪದವಿಯನ್ನು ಪಡೆದಿರಬೇಕು. ವಯೋಮಿತಿ 21 ರಿಂದ 30 ವರ್ಷದೊಳಗಿರಬೇಕು(1989ರ ನ.6 ರಿಂದ 1999ರ ನ.6ರೊಳಗೆ ಜನಿಸಿರಬೇಕು). ಕುಟುಂಬದ ವಾರ್ಷಿಕ ಆದಾಯವು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 4.50 ಲಕ್ಷ ರೂ., ಹಾಗೂ ಇತರೆ ವರ್ಗಗಳಿಗೆ 3.50 ಲಕ್ಷ ರೂ.ನಿಗದಿಗೊಳಿಸಲಾಗಿದೆ.
ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿದ್ದು, ಕರ್ನಾಟಕದಲ್ಲಿ ವಾಸ್ತವ್ಯ ಹೊಂದಿರಬೇಕು. ತರಬೇತಿ ಅವಧಿಯಲ್ಲಿ ಯಾವುದೇ ರೀತಿಯ ಶಿಷ್ಯವೇತನವನ್ನು ನೀಡಲಾಗುವುದಿಲ್ಲ. ಬಯೋಮೆಟ್ರಿಕ್ ಮೂಲಕ ತರಬೇತಿ ವೇಳೆ ಹಾಜರಾತಿಯನ್ನು ಪಡೆಯಲಾಗುವುದು. ಕನಿಷ್ಠ ಶೇ.80ರಷ್ಟು ಹಾಜರಾತಿ ಕಡ್ಡಾಯವಾಗಿದೆ.
ತರಬೇತಿ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಶಿವಮೊಗ್ಗ, ವಿಜಯಪುರ, ಬಳ್ಳಾರಿ, ದಾವಣೆಗೆರೆ, ಮಂಗಳೂರು ಜಿಲ್ಲೆಗಳಲ್ಲಿರುವ ತರಬೇತಿ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು ತಮಗೆ ಅನುಕೂಲಕರವಾದ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ದಾಖಲೆಗಳು: ಎಸೆಸೆಲ್ಸಿ, ಪಿಯುಸಿ, ಪದವಿ ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://gokdom.kar.nic.in ಅಥವಾ ನಿಮ್ಮ ಜಿಲ್ಲೆಗಳ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.







