ಎಷ್ಟು ಬೇಕಾದರೂ ಪ್ರತಿಭಟಿಸಿ, ಸಿಎಎ ವಾಪಸ್ ಪಡೆಯುವುದಿಲ್ಲ: ಅಮಿತ್ ಶಾ

ಲಕ್ನೋ: ಎಷ್ಟು ಬೇಕಾದರೂ ಪ್ರತಿಭಟಿಸಿ, ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಾಪಸ್ ಪಡೆಯಲಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲಕ್ನೋದಲ್ಲಿ ಸಿಎಎ ಪರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಕಾಯಿದೆಯ ಕುರಿತು ಸಾರ್ವಜನಿಕ ಸಂವಾದ ನಡೆಯಬೇಕೆದಂದು ಹೇಳಿದರು.
``ಎಷ್ಟೇ ಪ್ರತಿಭಟನೆಗಳು ನಡೆಯಲಿ ಕಾನೂನನ್ನು ವಾಪಸ್ ಪಡೆಯಲಾಗುವುದಿಲ್ಲ ಎಂದು ವಿರೊಧಿಗಳಿಗೆ ಹೇಳಬಯಸುತ್ತೇನೆ'' ಎಂದು ಅವರು ಹೇಳಿದರು.
"ಈ ಕಾನೂನಿನನ್ವಯ ಯಾರದ್ದೇ ಪೌರತ್ವವನ್ನು ವಾಪಸ್ ಪಡೆಯಲಾಗುವುದಿಲ್ಲ'' ಎಂದೂ ಅವರು ಸ್ಪಷ್ಟ ಪಡಿಸಿದರು. "ಈ ಮಸೂದೆ ಯಾರದ್ದೇ ಆದರೂ ಪೌರತ್ವವನ್ನು ಸೆಳೆಯುವುದಾದರೆ ಅದನ್ನು ಸಾಬೀತು ಪಡಿಸಿ'' ಎಂದು ಅವರು ವಿಪಕ್ಷಗಳಿಗೆ ಸವಾಲೆಸೆದರು.
"ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ನಾಯಕರ ಕಣ್ಣು ಕುರುಡಾಗಿದೆ ಹಾಗೂ ಕಿವಿ ಕಿವುಡಾಗಿದೆ" ಎಂದು ಅವರು ಹೇಳಿದರು.
ನಗರದ ಕ್ಲಾಕ್ ಟವರ್ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಪುತ್ರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯಾದವ್ ಅವರನ್ನು ಟೀಕಿಸಿದ ಅಮಿತ್ ಶಾ, "ಅಖಿಲೇಶ್ ಜೀ ನೀವು ಸಿದ್ಧಪಡಿಸಿದ ಭಾಷಣಗಳ ಮುಖಾಂತರ ಮಾತನಾಡುತ್ತಾ ಇರಿ. ಪೌರತ್ವ ವಿಚಾರದಲ್ಲಿ ಸ್ವತಂತ್ರವಾಗಿ ಐದು ನಿಮಿಷ ಮಾತನಾಡಿ ಎಂದು ನಾನು ನಿಮಗೆ ಸವಾಲೆಸೆಯುತ್ತೇನೆ'' ಎಂದು ಹೇಳಿದರು.







