ಯುದ್ಧದಲ್ಲಿ ನಾಪತ್ತೆಯಾಗಿದ್ದ ಸಾವಿರಾರು ಮಂದಿ ಮೃತ್ಯು: ದೃಢಪಡಿಸಿದ ಶ್ರೀಲಂಕಾ ಅಧ್ಯಕ್ಷ

ಕೊಲಂಬೊ, ಜ.21: ಸರಕಾರ ಮತ್ತು ಎಲ್‌ಟಿಟಿಇ(ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಮಧ್ಯೆ ನಡೆದ ಭೀಕರ ಅಂತರ್ಯುದ್ಧ ಕೊನೆಗೊಂಡಂದಿನಿಂದ ನಾಪತ್ತೆಯಾಗಿರುವ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಪ್ರತ್ಯೇಕತಾವಾದಿ ತಮಿಳು ಬಂಡುಕೋರ ಸಂಘಟನೆ ಎಲ್‌ಟಿಟಿಇ ಜತೆಗಿನ 30 ವರ್ಷದ ಅಂರ್ತಕಲಹವನ್ನು ಅಂತ್ಯಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಾಜಪಕ್ಸ ಆಗ ರಕ್ಷಣಾ ವಿಭಾಗದ ಪ್ರಮುಖರಾಗಿದ್ದರು. ಶ್ರೀಲಂಕಾದ ಉತ್ತರ ಮತ್ತು ಪೂರ್ವಭಾಗದಲ್ಲಿ ತಮಿಳು ಬಂಡುಗೋರರೊಂದಿಗೆ ನಡೆದ ಯುದ್ಧದಲ್ಲಿ ಕನಿಷ್ಟ 1,00,000 ಜನ ಸಾವಿಗೀಡಾಗಿದ್ದು 20,000ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದರು.
2009ರಲ್ಲಿ ಎಲ್‌ಟಿಟಿಯ ಮುಖ್ಯಸ್ಥ ವಿ ಪ್ರಭಾಕರನ್‌ನನ್ನು ಸೇನೆ ಹತ್ಯೆ ಮಾಡುವುದರೊಂದಿಗೆ ಯುದ್ಧ ಸಮಾಪ್ತಿಯಾಗಿತ್ತು. ಯುದ್ಧದ ಅಂತಿಮ ಹಂತದಲ್ಲಿ ಶ್ರೀಲಂಕಾ ಪಡೆಗಳು ಸಾವಿರಾರು ಮಂದಿಯನ್ನು ಹತ್ಯೆ ಮಾಡಿವೆ ಎಂದು ತಮಿಳರು ಆರೋಪಿಸುತ್ತಿದ್ದಾರೆ. ಆದರೆ ಶ್ರೀಲಂಕಾದ ಸೇನೆ ಇದನ್ನು ನಿರಾಕರಿಸುತ್ತಾ ಬಂದಿತ್ತು. ಅಂತರ್ಯುದ್ಧದ ಅಂತಿಮ ಹಂತದಲ್ಲಿ ಕನಿಷ್ಟ 40,000 ತಮಿಳು ನಾಗರಿಕರ ಹತ್ಯೆಯಾಗಿದೆ ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಹೇಳಿಕೆ ನೀಡಿತ್ತು. ಆದರೆ ಸರಕಾರ ಈ ಅಂಕಿಅಂಶದ ಬಗ್ಗೆ ಆಕ್ಷೇಪ ಸೂಚಿಸಿತ್ತು.
ಕಳೆದ ವಾರ ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಹನಾ ಸಿಂಗರ್‌ರೊಂದಿಗೆ ನಡೆಸಿದ ಸಭೆಯಲ್ಲಿ ಯುದ್ದದಲ್ಲಿ ನಾಪತ್ತೆಯಾಗಿರುವ ಸಾವಿರಾರು ಮಂದಿ ಮೃತಪಟ್ಟಿರುವುದಾಗಿ ಮೊತ್ತ ಮೊದಲ ಬಾರಿ ರಾಜಪಕ್ಸ ಒಪ್ಪಿಕೊಂಡಿದ್ದಾರೆ . ಅಗತ್ಯದ ತನಿಖಾ ಪ್ರಕ್ರಿಯೆಯ ಬಳಿಕ ನಾಪತ್ತೆಯಾಗಿರುವ ಜನರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಹಸ್ತಾಂತರಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.







