ಉಡುಪಿಗೆ ವಾರಾಹಿಯಿಂದ ನೀರು ಯೋಜನೆ: ವಿಧಾನಪರಿಷತ್‌ನ ಅರ್ಜಿ ಸಮಿತಿ ಪರಿಶೀಲನೆ

ಉಡುಪಿ, ಜ.21: ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆ ಕುರಿತಂತೆ, ಕರ್ನಾಟಕ ವಿಧಾನಪರಿಷತ್‌ನ ಅರ್ಜಿ ಸಮಿತಿಯು ಮಂಗಳವಾರ ಉಡುಪಿಗೆ ಆಗಮಿಸಿ ಪರಿಶೀಲನೆ ನಡೆಸಿತು.
ಕರ್ನಾಟಕ ವಿಧಾನಪರಿಷತ್‌ನ ಉಪ ಸಭಾಪತಿ ಹಾಗೂ ವಿಧಾನ ಪರಿಷತ್ ಅರ್ಜಿ ಸಮಿತಿಯ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಪರಿಷತ್‌ನ ಅರ್ಜಿ ಸಮಿತಿ ಸದಸ್ಯರಾದ ಶಾಸಕ ಎಸ್.ವಿ. ಸಂಕನೂರ್, ಮರಿ ತಿಬ್ಬೇಗೌಡ, ಪ್ರಕಾಶ್ ರಾಥೋಡ್, ರಘುನಾಥ್ ಮಲ್ಕಾಪುರ, ಪಿ.ಆರ್.ರಮೇಶ್, ಮೋಹನ್ ಕೊಂಡಾಜಿ ಅವರಿದ್ದ ಸಮಿತಿಯ ಸದಸ್ಯರು ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆಯ ಕಾಮಗಾರಿ ನಡೆಯುವ ಹಾಗೂ ಪೈಪ್‌ಲೈನ್ ಹಾದುಹೋಗುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಯೋಜನೆಯ ಸಂಪೂರ್ಣ ವಿವರಗಳನ್ನು ಪಡೆದ ಸಮಿತಿಯ ಸದಸ್ಯರು, ಈ ಬಗ್ಗೆ ಶಾಸಕರು ಹಾಗೂ ಸ್ಥಳೀಯ ಅಧಿಕಾರಿಗಳಿಂದ ಇನ್ನಷ್ಟು ಮಾಹಿತಿಗಳನ್ನು ಪಡೆದು ವಿಸ್ತೃತ ಚರ್ಚೆ ನಡೆಸಿದರು.
ಉಡುಪಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ಯೋಜನೆಯ ಮಹತ್ವವನ್ನು ಮನದಟ್ಟು ಮಾಡಿದ ಶಾಸಕ ಕೆ.ರಘುಪತಿ ಭಟ್, ತ್ವರಿತಗತಿಯಲ್ಲಿ ಕಾಮಗಾರಿಯನ್ನು ನಡೆಸಬೇಕಾದ ಅನಿವಾರ್ಯತೆಯ ಕುರಿತು ವಿವರಿಸಿದರು.
ಈ ಪ್ರಕಾರ ವಾರಾಹಿ ನದಿ ನೀರಿನ ಯೋಜನೆಗೆ ಸಂಬಂಧಿಸಿದಂತೆ ಇರುವ ಎಲ್ಲಾ ಅಡೆತಡೆಗಳನ್ನು, ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿ 2021ರೊಳಗೆ ಕಾಮಗಾರಿಯನ್ನು ಮುಗಿಸಲು ಸಮಿತಿ ನಿರ್ಧರಿಸಿತು.
ಸಭೆಯಲ್ಲಿ ಕೆಯುಐಡಿಎಫ್‌ಸಿಯ ಎಂ.ಡಿ. ಚಾರುಲತಾ, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿವಿಷ್ಣುವರ್ಧನ, ಡಿಎಫ್‌ಓ ಕಮಲ, ರುದ್ರನ್, ಕುಂದಾಪುರ ಉಪವಿಬಾಗಾಧಿಕಾರಿ ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರು, ವಾರಾಹಿ, ನೀರಾವರಿ, ನಗರಾಭಿವೃದ್ದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







