ಸಿಎಎ ವಿರುದ್ಧದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿಂದ ಪ್ರತ್ಯೇಕ ಸಾಂವಿಧಾನಿಕ ಪೀಠ

ಹೊಸದಿಲ್ಲಿ, ಜ.22: ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿದ್ದು, ಈ ಅರ್ಜಿಗಳ ವಿಚಾರಣೆಗೆ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಲಿದೆ.
ಕೇಂದ್ರ ಸರಕಾರದ ನಿಲುವನ್ನು ಆಲಿಸದೆ ಸಿಎಎಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಎಎ ಮಾನ್ಯತೆಯನ್ನು ಪ್ರಶ್ನಿಸುವ ಮನವಿಗೆ ಸ್ಪಂದಿಸಲು ಸುಪ್ರೀಂ ಕೋರ್ಟ್ ಇದೇ ವೇಳೆ ಕೇಂದ್ರ ಸರಕಾರಕ್ಕೆ ನಾಲ್ಕು ವಾರಗಳ ಗಡುವು ವಿಧಿಸಿದೆ.
ಸಿಎಎಗೆ ಸಂಬಂಧಿಸಿ ಡಿ.18 ರಂದು ಕೇಂದ್ರಕ್ಕೆ ನೋಟಿಸ್ ನೀಡಿದ್ದ ಸುಪ್ರೀಂ ಕೋರ್ಟ್ ನ ನ್ಯಾಯ ಪೀಠವು ಕೇಂದ್ರ ಸರಕಾರದ ಸ್ಪಷ್ಟನೆಯನ್ನು ಆಲಿಸದೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಯಾವುದೇ ತಡೆ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕೇಂದ್ರ ಸರಕಾರದ ಪರ ಅಟಾರ್ನಿ ಜನರಲ್ ವೇಣುಗೋಪಾಲ್ ಸುಪ್ರೀಂನ ನೋಟಿಸ್ ಗೆ ಉತ್ತರಿಸಲು ಕೇಂದ್ರ ಸರಕಾರ ಕಾಲಾವಕಾಶ ಬಯಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಿಎಎಯ ಅನುಷ್ಠಾನವನ್ನು ತಡೆಹಿಡಿಯಬೇಕು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡಬೇಕೆಂದು ನ್ಯಾಯಪೀಠವನ್ನು ಒತ್ತಾಯಿಸಿದರು. ಈ ಬಗ್ಗೆ ಕೇಂದ್ರದ ವಿಚಾರಣೆ ಮಾಡದೆ ಸಿಎಎಗೆ ಯಾವುದೇ ತಡೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ