ಕಲ್ಯಾಣಪುರ: ಜ.26ರಂದು ಮಿಲಾಗ್ರಿಸ್ ಮಿಲನ-2020
ಉಡುಪಿ, ಜ.22: ಜಿಲ್ಲೆಯ ಆರಂಭಿಕ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಒಂದಾದ ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಇದೀಗ ನಾಲ್ಕು ದಶಕಗಳನ್ನು ಪೂರೈಸಿದ್ದು, ತನ್ನ ಮಾಣಿಕ್ಯ ಮಹೋತ್ಸವದ ಸಮಾರೋಪ ಸಮಾರಂಭ ‘ಮಿಲಾಗ್ರಿಸ್ ಮಿಲನ-2020’ವನ್ನು ಜ.26ರಂದು ಸಂಜೆ ಆಯೋಜಿಸಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ. ಲಾರೆನ್ಸ್ ಸಿ ಡಿಸೋಜ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾಣಿಕ್ಯ ಮಹೋತ್ಸವದ ಕ್ಯಾಲಂಡರ್ ಬಿಡುಗಡೆಗೊಳಿಸಿದರೆ, ಶಾಲೆಯ ಸ್ಥಾಪಕರಾದ ವಂ.ವಿಲಿಯಮ್ ಗೊನ್ಸಾಲ್ವೀಸ್ ಹಳೆವಿದ್ಯಾರ್ಥಿಗಳ ಫೇಸ್‌ಬುಕ್ ಪೇಜ್‌ಗೆ ಚಾಲನೆ ನೀಡಲಿದ್ದಾರೆ. ಸಮಾರಂಭ ದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಜಿಪಂ ಅಧ್ಯಕ್ಷ ದಿನಕರಬಾಬು, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಎಂಎಲ್‌ಸಿ ಐವನ್ ಡಿಸೋಜ, ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಉಪಸ್ಥಿತರಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಲಿದ್ದಾರೆ. ಜಿಪಂ ಸದಸ್ಯ ಜನಾರ್ದನ ತೋನ್ಸೆ, ಲಿಟ್ಲ್‌ರಾಕ್ ಸ್ಕೂಲ್‌ನ ನಿರ್ದೇಶಕ ಮ್ಯಾಥ್ಯೂ ನೈನಾನ್, ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲರಾದ ವಂ.ಪ್ರವೀಣ್ ಮಾರ್ಟಿಸ್ ಉಪಸ್ಥಿತರಿರುವರು ಎಂದರು.
ಕಾರ್ಯಕ್ರಮ ಸಂಜೆ 4:30ಕ್ಕೆ ಪ್ರಾರಂಭಗೊಳ್ಳಲಿದ್ದು, 5:30ಕ್ಕೆ ನಗೆಹಬ್ಬ, 6:30ಕ್ಕೆ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 7 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಫಾ. ಲಾರೆನ್ಸ್ ಡಿಸೋಜ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ.ಲ್ಯಾನ್ಸಿ ಫೆರ್ನಾಂಡೀಸ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವೀರಾ ಡಿಸಿಲ್ವಾ, ಸಂಯೋಜಕಿಯರಾದ ಅನುಷಾ ಮತ್ತು ಪ್ರಿಯಾ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಮೈಕಲ್ ಮೆಂಡೋನ್ಸಾ, ಜಯೀಶ್ ಕಾಮತ್ ಉಪಸ್ಥಿತರಿದ್ದರು.







