ಮಹಿಳಾ ಆಯ್ಕೆ ಸಮಿತಿಗೆ ನೀತು, ಜಯಾ ಅರ್ಜಿ ಸಲ್ಲಿಕೆ

ಮುಂಬೈ, ಜ.25: ಭಾರತದ ಮಾಜಿ ಮಹಿಳಾ ಕ್ರಿಕೆಟಿಗರಾದ ನೀತು ಡೇವಿಡ್, ಜಯಾ ಶರ್ಮಾ ಹಾಗೂ ನೂಶಿನ್ ಅಲ್ ಖಾದೀರ್ ಮಹಿಳಾ ರಾಷ್ಟ್ರೀಯ ಆಯ್ಕೆ ಸಮಿತಿಯ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಮೂವರು ಕ್ರಿಕೆಟಿಗರಲ್ಲದೆ, ಲಾಯಾ ಫ್ರಾನ್ಸಿಸ್, ಶ್ಯಾಮಾ ಶಾ, ರೇನು ಮಾರ್ಗರೆಟ್ ಹಾಗೂ ವೆಂಕಟಾಚಾರ್ ಕಲ್ಪನಾ ಖಾಲಿ ಇರುವ ಐದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿತ್ತು. ಮಾಜಿ ಎಡಗೈ ಸ್ಪಿನ್ನರ್ ನೀತು 10 ಟೆಸ್ಟ್ ಹಾಗೂ 97 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಒಟ್ಟು 182 ಅಂತರ್‌ರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ ಜಯಾ 77 ಏಕದಿನ, ಏಕೈಕ ಟೆಸ್ಟ್ ಹಾಗೂ ಟ್ವೆಂಟಿ-20 ಪಂದ್ಯವನ್ನು ಆಡಿದ್ದಾರೆ. ಮಾಜಿ ಆಫ್ ಸ್ಪಿನ್ನರ್ ನೂಶಿನ್ 78 ಏಕದಿನ, 5 ಟೆಸ್ಟ್, ಹಲವು ಟಿ-20 ಪಂದ್ಯಗಳಲ್ಲಿ ಭಾರತದ ಪರ ಆಡಿದ್ದಾರೆ.
ಹೇಮಲತಾ ಕಾಲಾ ನೇತೃತ್ವದ ಮಹಿಳಾ ತಂಡದ ಆಯ್ಕೆ ಸಮಿತಿಯ ಅಧಿಕಾರದ ಅವಧಿ ಕೊನೆಗೊಂಡಿದ್ದು, ಬಿಸಿಸಿಐ ಭಾರತದ ಮಾಜಿ ಕ್ರಿಕೆಟಿಗರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ವಯೋಮಿತಿ 60 ವರ್ಷ ಎಂದು ನಿಗದಿಪಡಿಸಲಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕ್ರಿಕೆಟಿಗರು ಹಾಗೂ ಐದು ವರ್ಷಗಳ ಹಿಂದೆ ನಿವೃತ್ತಿಯಾಗಿರುವವರು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.