ಒಮರ್ ಅಬ್ದುಲ್ಲಾಗೆ ರೇಝರ್‌ಗಳನ್ನು ಕಳುಹಿಸಿದ ತಮಿಳುನಾಡು ಬಿಜೆಪಿ

ಹೊಸದಿಲ್ಲಿ,ಜ.28: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದಲೂ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನರೆತ ಗಡ್ಡವನ್ನು ಬಿಟ್ಟಿರುವ ಚಿತ್ರವು ಬಹಿರಂಗಗೊಂಡ ಬಳಿಕ ಅವರನ್ನು ಗೇಲಿ ಮಾಡಲು ತಮಿಳುನಾಡು ಬಿಜೆಪಿ ಘಟಕವು ಈ ಅವಕಾಶವನ್ನು ಬಳಸಿಕೊಂಡಿದೆ.
ಮಂಗಳವಾರ ತಮಿಳುನಾಡು ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ‘ಒಮರ್ ಅಬ್ದುಲ್ಲಾಗೆ ಉಡುಗೊರೆಯಾಗಿ ರೇಝರ್‌ಗಳ ಪೂರೈಕೆಗಾಗಿ ಅಮೆಝಾನ್‌ಗೆ ಆರ್ಡರ್‌ನ್ನು ಸಲ್ಲಿಸಲಾಗಿದೆ ’ಎಂದು ಟ್ವೀಟಿಸಿತ್ತು. ಈ ಸಂವೇದನಾಹೀನ ತಮಾಷೆಯನ್ನು ನೆಟ್ಟಿಗರು ವ್ಯಾಪಕವಾಗಿ ಟೀಕಿಸಿದ ಬಳಿಕ ಅದು ತನ್ನ ಟ್ವೀಟ್‌ನ್ನು ಅಳಿಸಿಹಾಕಿದೆ,ಆದರೆ ತನ್ನ ವಿವೇಚನಾರಹಿತ ಕೃತ್ಯಕ್ಕಾಗಿ ಕ್ಷಮೆಯನ್ನು ಯಾಚಿಸಿಲ್ಲ. ಅಮೆಝಾನ್ ಮೂಲಕ ರೇಝರ್‌ಗಳ ಪ್ಯಾಕೆಟ್ ಒಮರ್ ಗೆ ತಲುಪುವ ಹಾದಿಯಲ್ಲಿದೆ ಎಂದು ಭಾವಿಸಲಾಗಿದೆ. ಬಂಧನಕ್ಕೆ ಮುನ್ನ ಸದಾ ಶೇವ್ ಮಾಡಿಕೊಂಡಿರುತ್ತಿದ್ದ ಉಮರ್ ಗಡ್ಡವನ್ನು ಕೇಂದ್ರದ ಬಿಜೆಪಿ ಸಚಿವ ಗಿರಿರಾಜ ಸಿಂಗ್ ಅವರು ತಮಾಷೆ ಮಾಡಿದ್ದಾರೆ. ತಮಿಳುನಾಡು ಬಿಜೆಪಿಯ ಟ್ವೀಟ್ ಬಹಿರಂಗಗೊಳ್ಳುವ ಮುನ್ನ ಸಿಂಗ್, ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂದೆಗೆದುಕೊಳ್ಳಲಾಗಿದೆ,ಶೇವಿಂಗ್ ಬ್ಲೇಡ್‌ಗಳನ್ನಲ್ಲ ಎಂದು ಟ್ವೀಟಿಸಿದ್ದರು.





