ಘಟಿಕೋತ್ಸವದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ: ರಾಜ್ಯಪಾಲರಿಗೆ ಘೇರಾವ್ ಹಾಕಿದ ವಿದ್ಯಾರ್ಥಿಗಳು

ಕೋಲ್ಕತಾ, ಜ. 28: ವಿದ್ಯಾರ್ಥಿಗಳ ಗುಂಪೊಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಪಶ್ಚಿಮಬಂಗಳಾದ ರಾಜ್ಯಪಾಲ ಜಗದೀಪ್ ಧಂಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಇಲ್ಲಿನ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಘಟಿಕೋತ್ಸವ ನಡೆಯುತ್ತಿದ್ದ ನಝ್ರುಲ್ ಮಂಚಾ ಸ್ಥಳಕ್ಕೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬಲವಂತವಾಗಿ ಪ್ರವೇಶಿಸಿದರು.
ಪಶ್ಚಿಮಬಂಗಾಳದ ರಾಜ್ಯಪಾಲ ದಿನಕರ್ ಅವರು ಬಿಜೆಪಿಯ ಏಜೆಂಟ್ ಎಂದು ಹೇಳಿದ ವಿದ್ಯಾರ್ಥಿಗಳು, ರಾಜ್ಯಪಾಲರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾರೆವು ಎಂದು ಎಚ್ಚರಿಸಿದರು. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಧಂಕರ್ ಅವರಿಗೆ ಭದ್ರತಾ ಸಿಬ್ಬಂದಿ ರಕ್ಷಣೆ ನೀಡಿ ಗ್ರೀನ್ ರೂಂಗೆ ಕರೆದೊಯ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರಲ್ಲಿ ನೋಬೆಲ್ ಗೌರವಾನ್ವಿತ ಅಭಿಜಿತ್ ವಿನಾಯಕ ಬ್ಯಾನರ್ಜಿ ಇದ್ದರು. ಅವರು ಘಟಿಕೋತ್ಸದಲ್ಲಿ ಗೌರವ ಡಿಲಿಟ್ ಪದವಿ ಪಡೆಯಲಿದ್ದರು ಹಾಗೂ ಭಾಷಣ ಮಾಡಲಿದ್ದರು. ‘‘ರಾಜ್ಯಪಾಲರು ಹಿಂದಿರುಗುವಂತೆ ನಾವು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರಿಗೆ ನಾವು ಅವಕಾಶ ನೀಡಲಾರೆವು. ಅವರು ಬಿಜೆಪಿ ಏಜೆಂಟ್. ನಾವು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಒಪ್ಪಿಕೊಳ್ಳಲಾರೆವು’’ ಎಂದು ಪ್ರತಿಭಟನಕಾರರು ಹೇಳಿದರು.
‘‘ರಾಜ್ಯಪಾಲರ ನಿರ್ಗಮಿಸಿದ ಕೂಡಲೇ ನಾವು ತೆರಳುತ್ತೇವೆ. ನಮ್ಮ ಆಕ್ಷೇಪ ಇರುವುದು ರಾಜ್ಯಪಾಲರ ಉಪಸ್ಥಿತಿ ಬಗ್ಗೆ ಮಾತ್ರ. ಬಿಜೆಪಿಯ ಏಜೆಂಟ್ ಆಗಿರುವ ರಾಜ್ಯಪಾಲರು ವಿಶ್ವವಿದ್ಯಾನಿಲಯದ ಚಟುವಟಿಕೆಯಲ್ಲಿ ಕೈ ಹಾಕುವ ಅಗತ್ಯ ಇಲ್ಲ’’ ಎಂದು ಪ್ರತಿಭಟನಕಾರರು ಹೇಳಿದರು.







