ಮೌಢ್ಯ ನಿಷೇಧ ಕಾಯ್ದೆಗೆ ಸವಾಲೆಸೆದು ಶಾಸಕರ ನೇತೃತ್ವದಲ್ಲೇ 'ಸಿಡಿ ಉತ್ಸವ'
ದಲಿತ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಸುತ್ತಾಡಿಸುವ ಅನಿಷ್ಟ ಪದ್ಧತಿ

ದಾವಣಗೆರೆ, ಜ.28: ರಾಜ್ಯ ಸರ್ಕಾರ ಮೌಢ್ಯವನ್ನು ನಿಷೇಧ ಮಾಡಿದ್ದರೂ ಸಹ ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವ ಸರಾಗವಾಗಿ ನಡೆದಿದೆ.
ಕೆಂಚಿಕೊಪ್ಪ ಗ್ರಾಮ ದೇವತೆ ಜಾತ್ರೆ ಪ್ರಯುಕ್ತ ಜಾತ್ರೆ ನಡೆದಿದ್ದು, ಈ ವೇಳೆ ದಲಿತ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಆಕಾಶದಲ್ಲಿ ಸುತ್ತಾಡಿಸುವ ಅನಿಷ್ಟ ಪದ್ದತಿ ನಡೆಯಿತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ.ಶಾಂತನಗೌರ ಉತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅನಿಷ್ಠ ಪದ್ದತಿ ಅಲ್ಲ. ಗ್ರಾಮದ ಜನ ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಮೇಲಾಗಿ ನಾವು ದಲಿತ ಮಹಿಳೆ ಅಂತ ಹೇಳಲ್ಲ ಎಂದು ಸಮರ್ಥಿಸಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಿಡಿ ಉತ್ಸವ ನಿಷೇಧವಿದೆ. ಈ ಬಗ್ಗೆ ಬಗ್ಗೆ ಅಲ್ಲಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ: ಸಂಪುಟ ವಿಸ್ತರಣೆ ಕುರಿತು ಸಿಎಂ ಮತ್ತು ಕೇಂದ್ರದ ವರಿಷ್ಠರ ತೀರ್ಮಾನ ಮಾಡುತ್ತಾರೆ. ಯಾರು ಸಚಿವ ಸ್ಥಾನ ತ್ಯಾಗ ಮಾಡುತ್ತಾರೋ ಅವರನ್ನೆ ಕೇಳಿ, ನಾನು ಸಚಿವನಲ್ಲ. ನನಗೆ ಕೇಳಿದರೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನವನ್ನು ಬಿಟ್ಟಕೊಡುವೆ. ನನಗೆ ಗೂಟದ ಕಾರು ಅವಶ್ಯಕತೆ ಇಲ್ಲ. ಎತ್ತಿನ ಗಾಡಿಯಲ್ಲಿ ಓಡಾಡುತ್ತೇನೆ. ನನಗೆ ಗೂಟದ ಕಾರಿಗಿಂತ ಎತ್ತಿನ ಬಂಡಿ ಶಾಶ್ವತ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.







