ನಾನು ಸನ್ಯಾಸಿಯಲ್ಲ, ನನಗೂ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು, ಜ.28: ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸನ್ಯಾಸಿಯಲ್ಲ, ನನಗೂ ರಾಜಕೀಯ ಅಪೇಕ್ಷೆಗಳಿವೆ. ವಿಧಾನಪರಿಷತ್ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ನನಗಾಗಿ ಯಾರು ಪರಿಷತ್ ಸದಸ್ಯತ್ವವನ್ನು ತ್ಯಾಗ ಮಾಡುತ್ತಾರೆ ಎಂಬುದರ ಬಗ್ಗೆ ನಾನು ಭವಿಷ್ಯ ಹೇಳಲು ಹೋಗುವುದಿಲ್ಲ. ಈ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಇದ್ದಾರೆ. ಕೆಲವರು ತ್ಯಾಗ ಮಾಡುವುದಾಗಿ ಹೇಳಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಕೇಂದ್ರ ಸರಕಾರವು ‘ಒಂದು ದೇಶ-ಒಂದು ತೆರಿಗೆ’ ಜಾರಿಗೆ ತರಲು ನಿರ್ಧರಿಸಿದೆ. ನಮ್ಮ ರಾಜ್ಯದ ಜನ ದುಬಾರಿ ಬೆಲೆಯ ವಾಹನಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ, ನಮ್ಮ ಸರಕಾರಕ್ಕೆ ಬರಬೇಕಿರುವ ಆದಾಯದಲ್ಲಿ ಕುಸಿತವಾಗುತ್ತಿದೆ. ಆದುದರಿಂದ, ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೂ ಒಂದೇ ರೀತಿಯ ತೆರಿಗೆ ವಿಧಿಸಲು ಮುಂದಾಗಿದೆ. ಮುಂದಿನ ಬಜೆಟ್ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ಕಾನೂನು ಜಾರಿಗೆ ತರುತ್ತೇವೆ ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಶೇ.16, ಶೇ.18 ಹಾಗೂ ಶೇ.20ರಂತೆ ಪ್ರಸ್ತುತ ಮೂರು ಪ್ರಕಾರಗಳಲ್ಲಿ ವಾಹನ ತೆರಿಗೆಯನ್ನು ವಿಧಿಸುತ್ತಿದೆ. ಅದೇ ರೀತಿ ಕೇಂದ್ರ ಸರಕಾರವು ಶೇ.8, ಶೇ.10 ಹಾಗೂ ಶೇ.12ರಂತೆ ತೆರಿಗೆ ಹಾಕುತ್ತಿದೆ. ಒಂದು ದೇಶ-ಒಂದು ತೆರಿಗೆ ನೀತಿ ಜಾರಿಗೆ ಬಂದಲ್ಲಿ ನಮಗೆ ಸುಮಾರು ಒಂದು ಸಾವಿರ ಕೋಟಿ ರೂ.ಗಳ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿಯಲ್ಲಿ 1.30 ಲಕ್ಷ ಚಾಲಕರು ಹಾಗೂ ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಬೇಡಿಕೆಯಿದೆ. ಈ ವಿಚಾರದ ಕುರಿತು ವರದಿ ನೀಡಲು ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.







