ಸೆಮಿ ಫೈನಲ್‌ನಲ್ಲಿ ಫೆಡರರ್-ಜೊಕೊವಿಕ್ ಸೆಣಸು

ಮೆಲ್ಬೋರ್ನ್, ಜ.28: ಹಿರಿಯ ಟೆನಿಸ್ ತಾರೆ ರೋಜರ್ ಫೆಡರರ್ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಪುರುಷರ ಸಿಂಗಲ್ಸ್ ನಲ್ಲಿ ಸೆಮಿ ಫೈನಲ್‌ನಲ್ಲಿ ಸೆಣಸಾಡಲು ವೇದಿಕೆ ಸಿದ್ಧ್ದವಾಗಿದೆ.
ಫೆಡರರ್ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ನಲ್ಲಿ ಎರಡು ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡು ಸೋಲುವ ಭೀತಿಯಿಂದ ಪಾರಾದರು. ಏಳು ಮ್ಯಾಚ್ ಪಾಯಿಂಟ್ಸ್ ಉಳಿಸಿಕೊಂಡ ಫೆಡರರ್ ಅವರು ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗ್ರೆನ್‌ರನ್ನು 6-3, 2-6, 7-6(10/8)ಹಾಗೂ 6-3 ಸೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದರು.
ಆರು ಬಾರಿ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸಿರುವ ಫೆಡರರ್ ಮುಂದಿನ ಸುತ್ತಿನಲ್ಲಿ ದೀರ್ಘಕಾಲದ ಎದುರಾಳಿ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯ ಆಟಗಾರ ಜೊಕೊವಿಕ್ ಕೆನಡಾದ ಮಿಲೊಸ್ ರಾವೊನಿಕ್‌ರನ್ನು 6-4, 6-3, 7-6(1) ಸೆಟ್‌ಗಳ ಅಂತರದಿಂದ ಮಣಿಸಿದರು.
‘‘ನಾನು ಈ ಗೆಲುವಿಗೆ ಅರ್ಹನಲ್ಲ. ಆದರೆ, ನಾನಿಲ್ಲಿ ನಿಂತಿರುವೆ. ತಾತ್ವಿಕವಾಗಿ ಈ ಗೆಲುವು ನನಗೆ ಖುಷಿಕೊಟ್ಟಿದೆ’’ ಎಂದು ಕೆನ್ ರೋಸ್‌ವಾಲ್ ಬಳಿಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಅಂತಿಮ-4ರ ಸುತ್ತು ತಲುಪಿದ ಹಿರಿಯ ಟೆನಿಸ್ ತಾರೆ 38ರ ಹರೆಯದ ಫೆಡರರ್ ಹೇಳಿದ್ದಾರೆ.
ಫೆಡರರ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ 102ನೇ ಗೆಲುವು ದಾಖಲಿಸಿದರು. ಈ ಮೂಲಕ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ದಾಖಲೆಯನ್ನು ಸರಿಗಟ್ಟಿದರು. ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ತನ್ನ ಅತ್ಯಂತ ಯಶಸ್ವಿ ಗ್ರಾನ್‌ಸ್ಲಾಮ್ ಆಗಿ ರೂಪಿಸಿದರು. ಈ ಟೂರ್ನಿಯಲ್ಲಿ ಅವರು ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡು ದಶಕಗಳಿಂದ ಆಡುತ್ತಿರುವ ಫೆಡರರ್ 100ಕ್ಕಿಂತ ಹೆಚ್ಚಿನ ರ್ಯಾಂಕಿನ ಆಟಗಾರನ ವಿರುದ್ಧ ಸೋತಿಲ್ಲ. 2000ರಲ್ಲಿ 54ನೇ ರ್ಯಾಂಕಿನ ಅರ್ನೌಡ್ ಕ್ಲೆಮೆಂಟ್ ಅವರು ಫೆಡರರ್‌ರನ್ನು ಮಣಿಸಿದ್ದರು. ಅಮೆರಿಕದ ಹೊಸ ಮುಖ ಕ್ಲೆಮೆಂಟ್ 20 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್‌ಗೆ ತೀವ್ರ ಸವಾಲೊಡ್ಡಿದರು. ಕ್ಲೆಮೆಂಟ್ ಟೂರ್ನಿಯಲ್ಲಿ ಈಗಾಗಲೇ 8ನೇ ಶ್ರೇಯಾಂಕದ ಮ್ಯಾಟ್ಟೆಯೊ ಬೆರ್ರೆಟ್ಟಿನಿ ಹಾಗೂ 12ನೇ ಶ್ರೇಯಾಂಕದ ಫ್ಯಾಬಿಯೊ ಫೋಗ್ನಿನಿ ಅವರನ್ನು ಸೋಲಿಸಿ ಗಮನ ಸೆಳೆದಿದ್ದಾರೆ.







