ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ ಸಾವು

ಮೈಸೂರು,ಜ.28: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾಗಿ ಫೋಕ್ಸೊ ಪ್ರಕರಣದಡಿ ಜೀವಾವಧಿ ಶಿಕ್ಷೆಗೊಳಗಾಗಿ ಇತ್ತೀಚೆಗೆ ಪೆರೋಲ್ ಮೇಲೆ ಹೊರಬಂದಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.
ಮೈಸೂರಿನ ವಾಲೆ ಮಹೇಶ(36) ಎಂಬಾತನೇ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಶಿಕ್ಷೆಗೊಳಗಾದವ. 2017ರ ಡಿಸೆಂಬರ್ 21ರಂದು ಮೈಸೂರು ನ್ಯಾಯಾಲಯವು ಮಹೇಶ್ ನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲು ಶಿಕ್ಷೆ ಅನುಭವಿಸುತ್ತಿದ್ದ ಈತ ಕರುಳು ಬೇನೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆಂದು ಪೆರೋಲ್ ಮೇಲೆ ಇತ್ತೀಚೆಗೆ ಹೊರ ಬಂದಿದ್ದ. ಫೆಬ್ರವರಿ ಮೊದಲ ವಾರದಲ್ಲೇ ಮತ್ತೆ ಜೈಲಿಗೆ ಹೋಗಬೇಕಿತ್ತು. ಆದರೆ ಚಿಕಿತ್ಸೆ ಫಲಿಸದೇ ತನ್ನ ಮನೆಯಲ್ಲಿಯೇ ಇಂದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಆತನ ಕೋರಿಕೆಯಂತೆ ಸಂತ್ರಸ್ತ ಅಪ್ರಾಪ್ತೆಗೆ ಜನಿಸಿದ್ದ ಪುತ್ರಿಗೆ ಮಹೇಶನ ಪಾರ್ಥೀವ ಶರೀರದ ಅಂತಿಮ ದರ್ಶನ ಮಾಡಿಸಿ ಬಾಲಕಿಯ ಅಜ್ಜಿ ಮಾನವೀಯತೆ ಮೆರೆದಿದ್ದಾರೆ. ಪೆರೋಲ್ ಮೇಲೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ತಾನು ಸತ್ತರೆ ಬಾಲಕಿಯನ್ನು ಕರೆತಂದು ತನ್ನ ಮುಖ ದರ್ಶನ ಮಾಡಿಸಿ ನಂತರವೇ ಅಂತ್ಯಕ್ರಿಯೆ ಮಾಡಿ ಎಂದು ತನ್ನ ತಂದೆ ಮತ್ತು ತಂಗಿಯ ಬಳಿ ಕೇಳಿಕೊಂಡಿದ್ದ ಎನ್ನಲಾಗಿದೆ.
ಅದರಂತೆ ಆತನ ತಂದೆ ಮತ್ತು ತಂಗಿ ಬಾಲಕಿಯ ಅಜ್ಜಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಬಾಲಕಿಯನ್ನು ಕರೆತರುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಆಕೆ ತನ್ನ ಮೊಮ್ಮಗಳನ್ನು ಮಹೇಶನ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕರೆತಂದಿದ್ದಾರೆ. ಪ್ರಕರಣದಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಸಂತ್ರಸ್ತೆ ಮಾತ್ರ ಮಹೇಶ್ ಪಾರ್ಥೀವ ಶರೀರದ ದರ್ಶನಕ್ಕೆ ಮುಂದಾಗಿಲ್ಲ ಎನ್ನಲಾಗಿದ್ದು, ಅಕೆ ಈಗ ಪ್ರಾಪ್ತವಾಗಿದ್ದು, ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.







