ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ
2019ರಲ್ಲಿ ವಿಮಾನಯಾನ ಕೈಗೊಂಡವರ ಸಂಖ್ಯೆ ಎಷ್ಟು ಕೋಟಿ ಗೊತ್ತೇ ?

ಬೆಂಗಳೂರು, ಜ.28 : ದೇಶದ ಮೂರನೇ ಅತಿಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, 2019 ರಲ್ಲಿ ಒಟ್ಟಾರೆ 3.30 ಕೋಟಿ ಜನರು ವಿಮಾನಯಾನ ಕೈಗೊಂಡಿದ್ದಾರೆ.
2019 ರಲ್ಲಿ ಸ್ಥಳೀಯ ಪ್ರಯಾಣಿಕರಿಗಿಂತ ಅಂತರ್‌ರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2018 ರಲ್ಲಿ 2.8 ಕೋಟಿ ಸ್ಥಳೀಯ ಪ್ರಯಾಣಿಕರಿದ್ದರೆ, 2019 ರಲ್ಲಿ 2.87 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. 2019 ರಲ್ಲಿ ಸ್ಥಳೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.2.6 ಅಧಿಕವಾಗಿದೆ.
2018 ರಲ್ಲಿ ಅಂತರ್‌ರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 42.7 ಲಕ್ಷದಷ್ಟಿದ್ದರೆ, 2019 ರಲ್ಲಿ 48.7 ಲಕ್ಷ ಜನರು ವಿದೇಶ ಪ್ರಯಾಣ ಮಾಡಿದ್ದಾರೆ. ಒಟ್ಟಾರೆ ಇಡೀ ವರ್ಷದಲ್ಲಿ 3.30 ಕೋಟಿ ಜನರು ಪ್ರಯಾಣಿಸಿದ್ದಾರೆ. 2018 ರಲ್ಲಿ ಇದೇ ವೇಳೆಗೆ 3.23 ಕೋಟಿ ಪ್ರಯಾಣಿಕರು ಸಂಚಾರ ಮಾಡಿದ್ದರು.
ವಿಮಾನ ಸಂಚಾರ ಇಳಿಕೆ: ಭಾರತೀಯ ವಿಮಾನಯಾನ ಉದ್ಯಮದಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದರಿಂದಾಗಿ, 2019 ರಲ್ಲಿ ವಿಮಾನ ಸಂಚಾರದಲಿ ಶೇ.0.1 ರಷ್ಟು ಇಳಿಕೆಯಾಗಿದೆ. 2014 ರಿಂದ 2018 ರವರೆಗೆ ವಿಮಾನ ಸಂಚಾರ ಶೇಕಡವಾರು ಬೆಳವಣಿಗೆ ಎರಡಂಕಿ ದಾಟುತ್ತಿತ್ತು. ಆದರೆ, 2018 ರಲ್ಲಿ ಒಟ್ಟಾರೆ 2,35,190 ವಿಮಾನ ಸಂಚಾರವಿದ್ದರೆ, 2019 ರಲ್ಲಿ 2,35,058 ಕ್ಕೆ ತಲುಪಿದೆ.
ಅಂತರ್‌ರಾಷ್ಟ್ರೀಯ ಸಂಚಾರದಲ್ಲಿ ಹೆಚ್ಚಳವಾಗಿದ್ದು, 2018 ರಲ್ಲಿ 26,966 ಸಂಚಾರವಿತ್ತು. ಅದೇ 2019 ರಲ್ಲಿ ಅಂತರ್‌ರಾಷ್ಟ್ರೀಯ ಸಂಚಾರ ಪ್ರಮಾಣ ಶೇ.13 ಏರಿಕೆಯಾಗಿ, 30,556 ವಿಮಾನ ಸಂಚಾರ ಮಾಡಿದೆ.
25 ವಿದೇಶಿ ನಗರಗಳಿಗೆ ಸೇವೆ: ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶ್ವದ 25 ನಗರಗಳಿಗೆ ಸೇವೆ ನೀಡಲಾಗುತ್ತಿದೆ. ಅಲ್ಲದೆ, ದೇಶದ 82 ನಗರಗಳಿಗೆ ಸೇವೆ ಸಲ್ಲಿಸಲಾಗುತ್ತಿದೆ. 8 ಸ್ವದೇಶಿ, 4 ಭಾರತೀಯ ವಿಮಾನಯಾನ ಸಂಸ್ಥೆ ಸೇರಿ 36 ಪ್ರಯಾಣಿಕರ ವಿಮಾನಯಾನ ಸಂಸ್ಥೆಗಳು ಕೆಐಎಲ್ ನಿಂದ ಸೇವೆ ನೀಡುತ್ತಿವೆ.
2019 ರಲ್ಲಿ ದೇಶದೊಳಗಿನ ಏಳು ನಗರಗಳು ಹಾಗೂ ವಿದೇಶದ 2 ನಗರಗಳಿಗೆ ಹೊಸದಾಗಿ ಹಾರಾಟ ಆರಂಭಿಸಲಾಗಿದೆ. ಅದೇ ರೀತಿ 2020 ರ ಬೇಸಿಗೆ ಅಂತ್ಯದೊಳಗೆ ಟೋಕಿಯೋ ಮತ್ತು ಮ್ಯೂನಿಚ್‌ಗೆ ವಿಮಾನಯಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ದಿಲ್ಲಿ, ಸಿಂಗಾಪುರಕ್ಕೆ ಅಧಿಕ ಪ್ರಯಾಣ: ಬೆಂಗಳೂರು ವಿಮಾನ ನಿಲ್ದಾಣದಿಂದ ದಿಲ್ಲಿಯ ನಂತರ ಮುಂಬೈಗೆ ಅತಿಹೆಚ್ಚು ಜನರು ಪ್ರಯಾಣಿಸಿದ್ದಾರೆ. ಅದೇ ರೀತಿಯಲ್ಲಿ ವಿದೇಶ ಪ್ರಯಾಣದಲ್ಲಿ ಸಿಂಗಾಪುರ ಹಾಗೂ ದುಬೈಗೆ ಅಧಿಕ ಜನರು ವಿಮಾನಯಾನ ನಡೆಸಿದ್ದಾರೆ.







