‘ಸಂವಿಧಾನ ಅನುಸರಿಸಿ, ಇಲ್ಲವೇ ಹರಿದು ಹಾಕಿ’: ಎನ್ಆರ್ಸಿ, ಸಿಎಎಗೆ ಬಿಜೆಪಿ ಶಾಸಕನ ವಿರೋಧ

ಫೋಟೊ ಕೃಪೆ: twitter.com/NarayanMlaBjp
ಹೊಸದಿಲ್ಲಿ, ಜ. 28: ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪ್ರಸ್ತಾಪಿತ ಎನ್ಆರ್ಸಿಯನ್ನು ಮಂಗಳವಾರ ವಿರೋಧಿಸಿರುವ ಬಿಜೆಪಿ ಶಾಸಕ ನಾರಾಯಣ್ ತ್ರಿಪಾಠಿ, ದೇಶವನ್ನು ಧಾರ್ಮಿಕ ಆಧಾರದಲ್ಲಿ ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
‘‘ಒಂದೋ ನೀವು ಸಂವಿಧಾನವನ್ನು ಅನುಸರಿಸಿ ಅಥವಾ ಅದನ್ನು ಹರಿದು ಎಸೆಯಿರಿ. ಯಾಕೆಂದರೆ, ಸಂವಿಧಾನ ಜಾತ್ಯತೀತತೆಗೆ ಒತ್ತು ನೀಡುತ್ತದೆ. ಆದುದರಿಂದ ದೇಶವನ್ನು ಧಾರ್ಮಿಕ ಆಧಾರದಲ್ಲಿ ವಿಭಜಿಸಲು ಸಾಧ್ಯವಿಲ್ಲ’’ ಎಂದು ಮೈಹಾರ್ ಶಾಸಕ ತ್ರಿಪಾಠಿ ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳ ಜನರು ಆಧಾರ್ ಕಾರ್ಡ್ ಪಡೆಯಲೇ ತುಂಬಾ ಕಷ್ಟಪಟ್ಟರು. ನಗರ ಪ್ರದೇಶದಲ್ಲಿ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಜನರು ದಾಖಲೆಗಳನ್ನು ಎಲ್ಲಿಂದ ತರುತ್ತಾರೆ ಎಂದು ಅವರು ಹೇಳಿದರು. ಈ ಹಿಂದೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದಲ್ಲಿ ಇದ್ದ ತ್ರಿಪಾಠಿ, ದೇಶದಲ್ಲಿ ಕುಟುಂಬ ಕಲಹದ ಪರಿಸ್ಥಿತಿ ಇದೆ. ಇಂತಹ ಸ್ಥಿತಿ ಇದ್ದರೆ ಯಾವುದೇ ಗ್ರಾಮ, ಮೊಹಲ್ಲಾ ಅಥವಾ ದೇಶ ಶಾಂತಿ ಸ್ಥಿತಿಯನ್ನು ಆನಂದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.







