ಬೆಂಗಳೂರು ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್ ಕನ್ನಡದಲ್ಲಿಯೂ ಲಭ್ಯ
ಬೆಂಗಳೂರು, ಜ.28: ಭಾರತೀಯ ರೈಲ್ವೆಯ ನಾನಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಬೆಂಗಳೂರು ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ಈಗ ಕನ್ನಡದಲ್ಲಿ ವೆಬ್ ಆರಂಭಿಸಿದೆ. ಇದುವರೆಗೆ ಬೆಂಗಳೂರು ಆರ್‌ಆರ್‌ಬಿಯ ವೆಬ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅಷ್ಟೇ ಮಾಹಿತಿ ಸಿಗುತ್ತಿತ್ತು. ಇದೀಗ ಕನ್ನಡದಲ್ಲಿಯೇ ವೆಬ್‌ಸೈಟ್ ಆರಂಭ ಮಾಡಲಾಗಿದ್ದು, ವೆಬ್‌ಪೇಜ್‌ನಲ್ಲಿ ಕನ್ನಡವನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಭಾರತೀಯ ರೈಲ್ವೆಯು ನೇಮಕ ಪ್ರಕ್ರಿಯೆ ನಡೆಸಲು ಒಟ್ಟು 21 ನೇಮಕಾತಿ ಮಂಡಳಿಗಳನ್ನು ರಚಿಸಿದೆ. ಇದರಲ್ಲಿ ಬೆಂಗಳೂರು ರೈಲ್ವೆ ನೇಮಕಾತಿ ಮಂಡಳಿಯೂ ಒಂದಾಗಿದೆ. ಮುಖ್ಯವಾಗಿ ನೈರುತ್ಯ ರೈಲ್ವೆಯ ಹುದ್ದೆಗಳಿಗೆ ಈ ಮಂಡಳಿಯ ಮೂಲಕ ನೇಮಕ ನಡೆಯಲಿದೆ. ಅಧಿಸೂಚನೆಯಿಂದ ಹಿಡಿದು, ನೇಮಕಾತಿಯ ಪ್ರತಿ ಹಂತದ ಮಾಹಿತಿಯೂ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಲಭ್ಯವಿರುತ್ತಿತ್ತು. ಇನ್ನು ಮುಂದೆ ಕನ್ನಡದಲ್ಲಿಯೂ ಈ ಮಾಹಿತಿ ಲಭ್ಯವಾಗಲಿದೆ.
ಸದ್ಯ ಲಿಂಕ್‌ಗಳಲ್ಲಿ ಇಂಗ್ಲಿಷ್ ಮಾಹಿತಿಯೇ ಇದೆ. ಈಗಾಗಲೇ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ರೈಲ್ವೆಯು ಕನ್ನಡದಲ್ಲಿ ಪರೀಕ್ಷೆ ನಡೆಸುತ್ತಿದೆ. ಇದೀಗ ವೆಬ್‌ಸೈಟ್ ಅನ್ನೂ ಕನ್ನಡದಲ್ಲಿ ರೂಪಿಸಿ, ಅಭ್ಯರ್ಥಿಗಳಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ವಿವಿಧ ಕಡೆಗಳಲ್ಲಿರುವ 21 ಆರ್‌ಆರ್‌ಬಿಗಳ ಪೈಕಿ ಪ್ರಾದೇಶಿಕ ಭಾಷೆಯಲ್ಲಿ ವೆಬ್‌ಸೈಟ್ ರೂಪಿಸಿರುವುದು ಕನ್ನಡದಲ್ಲಿಯೇ ಮೊದಲನೆಯದಾಗಿದೆ. ಪ್ರಾಯೋಗಿಕವಾಗಿ ಕನ್ನಡದಲ್ಲಿ ವೆಬ್ ಆರಂಭಿಸಲಾಗಿದ್ದು, ಇದು ಯಶಸ್ವಿಯಾದಲ್ಲಿ 21 ಆರ್‌ಆರ್‌ಬಿಗಳ ವೆಬ್‌ಗಳನ್ನೂ ಆಯಾ ಪ್ರಾದೇಶಿಕ ಭಾಷೆಯಲ್ಲಿ ಆರಂಭಿಸಲಾಗುತ್ತದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಕನ್ನಡದ ವೆಬ್ http://www.rrbbnc.gov.in/kannada/indexk.html ನಲ್ಲಿ ನೋಡಬಹುದಾಗಿದೆ.







