ಯೂಟ್ಯೂಬ್ ಪ್ರೇರಣೆಯಿಂದ ಸರಗಳ್ಳತನ: ಇಬ್ಬರ ಬಂಧನ

ಬೆಂಗಳೂರು, ಜ.28: ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ಸರಗಳ್ಳತನ ದೃಶ್ಯಗಳನ್ನು ನೋಡಿ ಪ್ರೇರಣೆ ಪಡೆದು ಸರಗಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಬಸವನಗುಡಿ ಠಾಣಾ ಪೊಲೀಸರು, 13 ಲಕ್ಷದ 78 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ 3 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಚಿಕ್ಕಬಾಣಸವಾಡಿಯ ಒಎಂಬಿಆರ್ ಲೇಔಟ್‌ನ ರಾಮಮೂರ್ತಿ(33) ಹಾಗೂ ಎಲೆಕ್ಟ್ರಾನಿಕ್ ಸಿಟಿಯ ನಾಗನಾಥಪುರದ ಕಾರ್ತಿಕ್(35) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಆರ್ ಕಾಲನಿಯ ಮುಖ್ಯರಸ್ತೆಯ ಬಳಿ ಇತ್ತೀಚೆಗೆ ನಡೆದಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಸವನಗುಡಿ ಠಾಣಾ ಪೊಲೀಸರ ನೇತೃತ್ವದಲ್ಲಿ ರಚಿಸಿದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ಬಾರ್ ಬೆಂಡಿಂಗ್(ಕಂಬಿ ಕಟ್ಟುವ ಕೆಲಸ) ಮಾಡಿಸುತ್ತಿದ್ದು ಹಲವರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಕೆಲಸದ ವೇಳೆ ನಷ್ಟ ಉಂಟಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಮನೆ ವಿಳಾಸವನ್ನು ಬದಲಿಸಿ ಸಾಲ ಕೊಟ್ಟವರಿಗೆ ಸಿಗದಂತೆ ಓಡಾಡುತ್ತಿದ್ದರು. ಕೆಲಸವಿಲ್ಲದೇ ಸಾಲಗಾರರ ಕಿರುಕುಳ ತಾಳಲಾರದೆ ಸುಲಭವಾಗಿ ಹಣ ಗಳಿಸಲು ಕಳ್ಳತನಕ್ಕೆ ಇಳಿದಿರುವುದಾಗಿ ವಿಚಾರಣೆಯಲ್ಲಿ ಬಾಯಿಬಿಟ್ಟಿದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





