ನಕಲಿ ವೀಡಿಯೊ ಪ್ರಚಾರದ ಆರೋಪ: ಅಮಿತ್ ಶಾ ಚುನಾವಣಾ ಪ್ರಚಾರದ ಮೇಲೆ 48 ಗಂಟೆ ನಿಷೇಧ ಹೇರಲು ಆಪ್ ಮನವಿ
ಹೊಸದಿಲ್ಲಿ, ಜ. 29: ಬಿಜೆಪಿ ನಾಯಕರು ದಿಲ್ಲಿ ಸರಕಾರಿ ಶಾಲೆಯ ನಕಲಿ ವೀಡಿಯೊಗಳನ್ನು ಪ್ರಸಾರ ಮಾಡಿದ ವಿರುದ್ಧ ಆಪ್ ನಾಯಕರಾದ ಸಂಜಯ್ ಸಿಂಗ್ ಹಾಗೂ ಪಂಕಜ್ ಗುಪ್ತಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಚುನಾವಣಾ ಪ್ರಚಾರದ ಸ್ಟಾರ್ಗಳ ಪಟ್ಟಿಯಿಂದ ಅನುರಾಗ್ ಠಾಕೂರ್ ಹಾಗೂ ಪರ್ವೇಶ್ ವರ್ಮಾ ಅವರನ್ನು ತೆಗೆಯುವಂತೆ ಚುನಾವಣಾ ಆಯೋಗ ಬಿಜೆಪಿಗೆ ಆದೇಶಿಸಿದ ಬಳಿಕ ಆಪ್, ದಿಲ್ಲಿಯ ಸರಕಾರಿ ಶಾಲೆಗಳ ಬಗ್ಗೆ ನಕಲಿ ವೀಡಿಯೊ ಟ್ವೀಟ್ ಮಾಡಿದ ಕೇಂದ್ರ ಸಚಿವ ಅಮಿತ್ ಶಾ ಅವರ ಮೇಲೆ 48 ಗಂಟೆ ಚುನಾವಣಾ ಪ್ರಚಾರ ನಿಷೇಧಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ದಿಲ್ಲಿಯ ಸರಕಾರಿ ಶಾಲೆಗಳ ಬಗ್ಗೆ ತಪ್ಪು ಚಿತ್ರಣ ನೀಡುವ ನಕಲಿ ಹಾಗೂ ತಿರುಚಿದ ವೀಡಿಯೊಗಳನ್ನು ಬಿಜೆಪಿ ಸಂಸದರಾದ ಗೌತಮ್ ಗಂಭೀರ್, ಪರ್ವೇಶ್ ವರ್ಮಾ ಹಾಗೂ ಹನ್ಸ್ ರಾಜ್ ಹನ್ಸ್ ಪ್ರಚಾರ ಮಾಡಿದ್ದಾರೆ ಎಂದು ಕೂಡ ಆಪ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.
ಈ ಮೂವರು ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೂಡ ಆಪ್ ಕೋರಿದೆ. ಹೊಸದಿಲ್ಲಿಯಲ್ಲಿ ಸರಕಾರ ನಡೆಸುತ್ತಿರುವ ಶಾಲೆಗಳ ಪರಿಸ್ಥಿತಿ ಶೋಚನೀಯ ಇದೆ ಎಂದು ಹೇಳುವ ವೀಡಿಯೊವೊಂದನ್ನು ಶಾ ಮಂಗಳವಾರ ಟ್ವೀಟ್ ಮಾಡಿದ್ದರು.