ಬೈಲೂರು: ಗುಲಾಬಿ ಆಂದೋಲನ
ಉಡುಪಿ, ಜ.30: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ, ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಗುಲಾಬಿ ಆಂದೋಲನ ಜಾಥಾ ಕಾರ್ಯಕ್ರಮ ನಡೆಯಿತು.
ಜಾಥಾ ಕಾರ್ಯಕ್ರಮಕ್ಕೆ ನೀರೆ ಬೈಲೂರು ಗ್ರಾಪಂ ಅಧ್ಯಕ್ಷ ಸದಾನಂದ ಪ್ರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಾಥಾ ಮೆರವಣಿಗೆ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಮುಖ್ಯ ರಸ್ತೆಯ ಮೂಲಕ ಸಾಗಿ ನಗರದ ಎಲ್ಲಾ ಅಂಗಡಿ, ಹೋಟೇಲ್ ಮತುತಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಂದ ಒಂದು ಗುಲಾಬಿ ಹೂ ನೀಡುವುದರ ಜತೆಗೆ ತಂಬಾಕು ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬ ಘೋಷಣೆಯೊಂದಿಗೆ ನಗರದ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನೀರೆ ಬೈಲೂರು ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ತಂಬಾಕು ರಹಿತ ಸಮಾಜಕ್ಕಾಗಿ ನಾವೆಲ್ಲರೂ ಜತೆಗೂಡಿ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗೋಣ ಎಂದರು.
ಕಾರ್ಕಳ ತಾಲೂಕು ಆರೋಗ್ಯ ಅಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಯಾವುದೇ ಬಗೆಯ ಹೊಗೆರಹಿತ ಅಥವಾ ಹೊಗೆ ಸಹಿತ ತಂಬಾಕು ಎಷ್ಟೇ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೂ ಸಹ ಅದು ಸುರಕ್ಷಿತವಲ್ಲ, ಅಪಾಯಕಾರಿ. ಇದು ಕುಟುಂಬದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ತಾಪಂ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಮಾತನಾಡಿದರು. ಕಾಲೇಜಿನ ಉಪಪ್ರಾಂಶುಪಾಲ ನಾಗರಾಜ್, ಬೈಲೂರು ಪ್ರಾ.ಆ.ಕೇಂದ್ರದ ಡಾ. ಮಹಾಂತ್ ಹೆಗ್ಡೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಮೇಶ್ ನಾಯಕ್, ಜಿಲ್ಲಾ ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು ಮತ್ತು ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಶಿವರಾವ್ ಭಟ್ ವಂದಿಸಿದರು.







