ರಣಜಿ ಟ್ರೋಫಿ: ಕರ್ನಾಟಕಕ್ಕೆ ಗೆಲುವು

ಹೊಸದಿಲ್ಲಿ, ಜ,30: ಮಧ್ಯಮ ವೇಗಿ ರೋನಿತ್ ಮೋರೆ (32ಕ್ಕೆ 6) ಶ್ರೇಷ್ಠ ಪ್ರದರ್ಶನದ ನೆರವಿನಲ್ಲಿ ರೈಲ್ವೆ ವಿರುದ್ಧ ಕರ್ನಾಟಕ ರಣಜಿ ಪಂದ್ಯದಲ್ಲಿ 10 ವಿಕೆಟ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಬೋನಸ್ ಪಾಯಿಂಟ್‌ನ್ನು ತನ್ನದಾಗಿಸಿಕೊಂಡಿದೆ.
ಈ ಪಂದ್ಯದಲ್ಲಿ 7 ಅಂಕಗಳನ್ನು ಪಡೆದಿದೆ. ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದ ಬಲಗೈ ಮಧ್ಯಮ ವೇಗಿ ಮೋರೆ ಪಂದ್ಯದ ನಾಲ್ಕನೇ ದಿನವಾಗಿರುವ ಗುರುವಾರ ರೈಲ್ವೇಸ್ ಬ್ಯಾಟಿಂಗ್‌ನ್ನು ಎರಡನೇ ಇನಿಂಗ್ಸ್‌ನಲ್ಲಿ 30 ಓವರ್‌ಗಳಲ್ಲಿ 79 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಗೆಲುವಿಗೆ 51 ರನ್ ಗಳಿಸಬೇಕಾದ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 8.2 ಓವರ್‌ಗಳಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ತಂಡದ ಪರ ಆರಂಭಿಕ ಬ್ಯಾಟ್ಸ್ ಮನ್‌ಗಳಾದ ರೋಹನ್ ಕದಮ್ (ಔಟಾಗದೆ 27 ) ಮತ್ತು ದೇವದತ್ತ ಪಡಿಕ್ಕಲ್ (ಔಟಾಗದೆ 24) ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೂರನೇ ದಿನದಾಟದಂತ್ಯಕ್ಕೆ 65 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸಿದ್ದ ಕರ್ನಾಟಕ ನಾಲ್ಕನೇ ದಿನದ ಆಟ ಮುಂದುವರಿಸಿ ಈ ಮೊತ್ತಕ್ಕೆ 12 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಇದರೊಂದಿಗೆ ರೈಲ್ವೇಸ್ ವಿರುದ್ಧ ಕರ್ನಾಟಕ 29 ರನ್‌ಗಳ ಮುನ್ನಡೆ ಸಾಧಿಸಿತ್ತು.
ಬುಧವಾರದ ದಿನದಾಟದಂತ್ಯಕ್ಕೆ 56 ರನ್ ಗಳಿಸಿ ಔಟಾಗದೆ ಉಳಿದಿದ್ದ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ತನ್ನ ವೈಯಕ್ತಿಕ ಸ್ಕೋರ್‌ನ್ನು 62ಕ್ಕೆ ಏರಿಸಿ ಪ್ರದೀಪ್ ಟಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಕರ್ನಾಟಕದ ಮೊದಲ ಇನಿಂಗ್ಸ್ ಕೊನೆಗೊಂಡಿತು. ಪ್ರತೀಕ್ ಜೈನ್ (8) ನಿನ್ನೆಯ ಮೊತ್ತಕ್ಕೆ 6 ರನ್ ಸೇರಿಸಿ ಅಜೇಯರಾಗಿ ಉಳಿದರು.
ರೈಲ್ವೇಸ್‌ನ ಅಮಿತ್ ಮಿಶ್ರಾ 70ಕ್ಕೆ 5 ವಿಕೆಟ್, ಹಿಮಾಂಶು ಸಾಂಗ್ವಾನ್ 57ಕ್ಕೆ 3, ಪ್ರದೀಪ್ ಟಿ ಮತ್ತು ಅವಿನಾಶ್ ಯಾದವ್ ತಲಾ 1 ವಿಕೆಟ್ ಹಂಚಿಕೊಂಡರು.
ಎರಡನೇ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ಖಾತೆ ತೆರೆಯುವ ಮೊದಲೇ ಆಶೀಷ್ ಸೆರ್ಹಾವತ್(0) ವಿಕೆಟ್ ಕಳೆದುಕೊಂಡಿತು. ಆರಂಭದಲ್ಲಿ ಮಿಥುನ್ ಮತ್ತು ಪ್ರತೀಕ್ ಜೈನ್ ರೈಲ್ವೇಸ್ ತಂಡದ ಅಗ್ರ ಸರದಿಯ ದಾಂಡಿಗರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಸೌರಭ್ ಸಿಂಗ್(0) ಅವರು ಖಾತೆ ತೆರೆಯಲಿಲ್ಲ. ಮೃನಾಲ್ ದೇವಧರ್ ಮಾತ್ರ ಹೋರಾಟ ನಡೆಸಿದರು. ಅವರು 82 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಲ್ಲಿ 38 ರನ್ ಗಳಿಸಿರುವುದು ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ನಾಯಕ ಅರಿಂದಮ್‌ಘೋಷ್ 3 ರನ ಗಳಿಸಿ ಮಿಥುನ್‌ಗೆ ವಿಕೆಟ್ ಒಪ್ಪಿಸಿದರು. ಮಹೇಶ್ ರಾವತ್ (5), ಹರೀಶ್ ತ್ಯಾಗಿ(8), ದಿನೇಶ್ ಮೋರ್(6), ಅವಿನಾಶ್ ಯಾದವ್(0), ಪ್ರದೀಪ್ ಟಿ(0) ಕಳಪೆ ಮೊತ್ತಕ್ಕೆ ಮೋರೆಗೆ ವಿಕೆಟ್ ಒಪ್ಪಿಸಿದರು. ಆದರೆ ಏಕಾಂಗಿ ಹೋರಾಟ ನಡೆಸಿದ ದೇವಧರ್ 38 ರನ್ ಗಳಿಸಿ ಮಿಥುನ್ ಎಸೆತದಲ್ಲಿ ಸಿದ್ಧಾರ್ಥ್‌ಗೆ ಕ್ಯಾಚ್ ನೀಡಿದರು. ಕರ್ನಾಟಕ ತಂಡದ ರೋಣಿತ್ ಮೋರೆ 32ಕ್ಕೆ 6 , ಅಭಿಮನ್ಯು ಮಿಥುನ್ 17ಕ್ಕೆ 3 ಮತ್ತು ಪ್ರತೀಕ್ ಜೈನ್ 28ಕ್ಕೆ 1 ವಿಕೆಟ್ ಹಂಚಿಕೊಂಡರು. ಹಾಲಿ ಚಾಂಪಿಯನ್‌ಗೆ ಸೋಲು
ಸೂರತ್‌ನಲ್ಲಿ ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ಗುಜರಾತ್ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ.
ಮನ್‌ಪ್ರೀತ್ ಜುನೆಜಾ ಮತ್ತು ಪಾರ್ಥಿವ್ ಪಟೇಲ್ ತಲಾ 41 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಗೆಲುವಿಗೆ 179ರನ್ ಗಳಿಸಬೇಕಿದ್ದ ಗುಜರಾತ್ ಮೂರನೇ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟದಲ್ಲಿ 74 ರನ್ ಗಳಿಸಿತ್ತು. ಅಂತಿಮ ದಿನ ಗೆಲುವಿಗೆ 105 ರನ್ ಗಳಿಸಬೇಕಿತ್ತು. 54.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸುವ ಮೂಲಕ ವಿದರ್ಭ ಗೆಲುವಿನ ದಡ ತಲುಪಿತು. ಮುಂಬೈ- ಹಿಮಾಚಲ ಪ್ರದೇಶ ಪಂದ್ಯ ಮಳೆಗಾಹುತಿ
ಧರ್ಮಶಾಲಾದಲ್ಲಿ ಮುಂಬೈ- ಹಿಮಾಚಲ ಪ್ರದೇಶ ಪಂದ್ಯದ ನಾಲ್ಕನೇ ಮತ್ತು ಅಂತಿಮ ದಿನದ ಆಟ ನಡೆಯಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಸೋಮವಾರದ ಆರಂಭಿಕ ದಿನದಂದು ಮಾತ್ರ ಆಟ ಸಾಧ್ಯವಾಗಿತ್ತು. ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅಜೇಯ 226 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಫಲಿತಾಂಶವು ಮುಂಬೈಗೆ ನಾಕೌಟ್ ಹಾದಿ ಕಠಿಣವಾಗಲು ಕಾರಣವಾಗಿದೆ.
41 ಬಾರಿ ರಣಜಿ ಟ್ರೋಫಿ ಜಯಸಿದ ಮುಂಬೈ ತಂಡ ಮುಂದಿನ ಫೆಬ್ರವರಿ 4 ರಿಂದ ರಾಜ್‌ಕೋಟ್‌ನಲ್ಲಿ ನಡೆಯುವ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಅಸ್ಸಾಂ ವಿರುದ್ಧ ಒಡಿಶಾ ಮತ್ತು ಝಾರ್ಖಂಡ್ ವಿರುದ್ಧ ಸರ್ವೀಸಸ್ ಜಯ ಗಳಿಸಿದೆ.
ಮತ್ತೊಂದು ಗ್ರೂಪ್ ಸಿ ಪಂದ್ಯದಲ್ಲಿ, ಮಹಾರಾಷ್ಟ್ರವು ಅಗರ್ತಲಾದಲ್ಲಿ ತ್ರಿಪುರ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದೆ







