ಬಾಂಗ್ಲಾದ ಕ್ರಿಕೆಟ್ ಕೋಚ್ ರಾಜೀನಾಮೆ

ಢಾಕಾ, ಜ.30: ಇಂಡಿಯನ್ ಪ್ರೀಮಿಯರ್ ಲೀಗ್‌ನ ಸನ್‌ರೈಸರ್ಸ್ ಹೈದರಾಬಾದ್ ಸೇರಲು ಬಾಂಗ್ಲಾದೇಶದ ಸಾಮರ್ಥ್ಯ ಮತ್ತು ಕ್ಷಮತೆಯ ಕೋಚ್ ಮಾರಿಯೋ ವಿಲ್ಲವರಾಯನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಶ್ರೀಲಂಕಾದ ಮರಿಯೋ 2014ರಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೇರ್ಪಡೆಗೊಂಡಿದ್ದರು. ಅಂದಿನಿಂದ ಬಾಂಗ್ಲಾ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಾರಿಯೋ ಜನವರಿ 29 ರಂದು ತಮ್ಮ ರಾಜೀನಾಮೆಯನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಸಲ್ಲಿಸಿದ್ದರು ಮತ್ತು ಝಿಂಬಾಬ್ವೆ ವಿರುದ್ಧದ ಮುಂಬರುವ ತವರು ಸರಣಿಯು ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ತಂಡದೊಂದಿಗೆ ಅವರ ಕೊನೆಯ ಜವಾಬ್ದಾರಿಯಾಗಿದೆ ಎಂದು ತಿಳಿದುಬಂದಿದೆ.
‘‘ಹೌದು ನಾನು ರಾಜೀನಾಮೆ ನೀಡಿದ್ದೇನೆ ಎಂದು ಮಾರಿಯೋ ಗುರುವಾರ (ಜನವರಿ 30) ಆಂಗ್ಲ ವೆಬ್‌ಸೈಟ್ ಒಂದಕ್ಕೆ ತಿಳಿಸಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ನನಗೆ ಆಫರ್ ಬಂದಿದೆ ಮತ್ತು ಇದು ತುಂಬಾ ಉತ್ತಮ ಅವಕಾಶವಾಗಿದೆ . ಈ ಕಾರಣದಿಂದಾಗಿ ಅವರ ಆಹ್ವಾನವನ್ನು ಸ್ವೀಕರಿಸುತ್ತೇನೆ ಎಂದು ಅವರು ಹೇಳಿದರು. ‘‘ಆರು ವರ್ಷಗಳ ಕಾಲ ನಾನು ಬಾಂಗ್ಲಾ ತಂಡಕ್ಕಾಗಿ ಸೇವೆ ಸಲ್ಲಿಸಿದ್ದೆ. ಖಂಡಿತವಾಗಿಯೂ ನಾನು ಇನ್ನು ಆ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ’’ ಎಂದು ತಿಳಿಸಿದರು.
ಬಿಸಿಬಿ ಮುಖ್ಯ ಕಾರ್ಯನಿರ್ವಾಹಕ ನಿಝಾಮುದ್ದೀನ್ ಚೌಧರಿ ಅವರ ಪ್ರಕಾರ, ಮಾರಿಯೋ ಬಾಂಗ್ಲಾ ತಂಡದಲ್ಲಿ ಉಳಿಯಲು ಬಯಸಿದ್ದರು ಮತ್ತು ಐಪಿಎಲ್ ಸಮಯದಲ್ಲಿ ರಜೆ ಬಯಸಿದ್ದರು, ಆದರೆ ಆ ಸಮಯದಲ್ಲಿ ಬಾಂಗ್ಲಾಕ್ಕೆ ಐರ್ಲೆಂಡ್ ವಿರುದ್ಧ ಟ್ವೆಂಟಿ-20 ಪಂದ್ಯಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮಾರಿಯೋ ಅವರ ಕೋರಿಕೆಯನ್ನು ಬಿಸಿಬಿ ಒಪ್ಪಲಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ನಾವು ಮಾರಿಯೋ ಅವರೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಹೊಂದಿದ್ದೇವೆ ಮತ್ತು ಅವರು ರಾಷ್ಟ್ರೀಯ ಕ್ರಿಕೆಟ್ ತಂಡದೊಂದಿಗೆ ಪೂರ್ಣ ಸಮಯ ಕೆಲಸ ಮಾಡಬೇಕಾಗುತ್ತದೆ ಎಂದು ಚೌಧರಿ ಹೇಳಿದರು.
ಅವರು ಐಪಿಎಲ್‌ನಲ್ಲಿ ಕೆಲಸ ಮಾಡಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ನಮ್ಮ ಯಾವುದೇ ಪೂರ್ಣಕಾಲಿಕ ಕೋಚಿಂಗ್ ಸಿಬ್ಬಂದಿಯನ್ನು ಐಪಿಎಲ್‌ನಲ್ಲಿ ಕೆಲಸ ಮಾಡಲು ನಾವು ಅನುಮತಿ ನೀಡುವುದಿಲ್ಲ, ಏಕೆಂದರೆ ಆ ಸಮಯದಲ್ಲಿ ಕೋಚ್ ಸರಣಿ ಅಥವಾ ತರಬೇತಿ ಶಿಬಿರ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.







