ಎಚ್‌ಎಎಲ್: ಲಕ್ನೋದಲ್ಲಿ ಫೆ.5ರಿಂದ ಡೆಫ್ ಎಕ್ಸ್‌ಪೋ-2020
ಬೆಂಗಳೂರು, ಜ.30: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಫೆ.5 ರಿಂದ 9ರವರೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ತನ್ನ 11ನೇ ದ್ವೈವಾರ್ಷಿಕ ಆವೃತ್ತಿಯಾದ ಡೆಫ್‌ಎಕ್ಸ್‌ಪೋ-2020 ಎಂಬ ವಿಮಾನಯಾನ ಪ್ರದರ್ಶನವನ್ನು ಆಯೋಜಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್, ಕಳೆದ ಎರಡು ವರ್ಷಗಳಲ್ಲಿ ರಕ್ಷಣಾ ಪ್ರದರ್ಶನಗಳನ್ನು ಆಯೋಜಿಸುವಲ್ಲಿ ಎಚ್‌ಎಎಲ್ ಪ್ರಮುಖ ಪಾತ್ರ ವಹಿಸಿದೆ. ಪ್ರದರ್ಶನದಲ್ಲಿ ಪ್ರಮುಖವಾಗಿ ಸ್ಥಳೀಯವಾಗಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಸ್ಥಿರ ಮತ್ತು ರೋಟರಿ ಪ್ಲಾಟ್‌ಫಾರ್ಮ್ ಹೊಂದಿರುವ ವಿಮಾನಗಳು ಪ್ರದರ್ಶನ ನೀಡಲಿವೆ ಎಂದು ತಿಳಿಸಿದ್ದಾರೆ.
ಎಚ್‌ಎಎಲ್ ಪ್ರದರ್ಶನದ ಒಳಾಂಗಣ ಸ್ಟಾಲ್‌ನಲ್ಲಿ ಲೈಟ್ ಕಂಬ್ಯಾಟ್ ಏರ್‌ಕ್ರಾಫ್ಟ್(ಎಲ್‌ಸಿಎ) ತೇಜಸ್, ಲೈಟ್ ಕಂಬ್ಯಾಟ್ ಹೆಲಿಕಾಪ್ಟರ್(ಎಲ್‌ಸಿಎಚ್), ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್(ಎಎಲ್‌ಎಚ್) ಸೇರಿದಂತೆ ವಿಮಾನಗಳ ವಿವಿಧ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದ್ದಾರೆ.
ಸುಖೋಯ್ -30 ಪ್ರದರ್ಶನದ ಆಕರ್ಷಣೆಯಾಗಲಿದೆ. ಪ್ರದರ್ಶನದಲ್ಲಿ ವಿದೇಶಿ ನಿಯೋಗಗಳೊಂದಿಗೆ ಸಭೆ, ವೈವಿಧ್ಯಮಯ ಏರೋಸ್ಪೇಸ್ ಕುರಿತ ಸಮಾವೇಶಗಳನ್ನು ಏರ್ಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.







