ಪೊಲೀಸರ ಸಮ್ಮುಖದಲ್ಲೇ ದಾಳಿ!
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ಬಳಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ ವಿವಿಯ ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವುದಾಗಿ ವರದಿಯಾಗಿದೆ. 19 ವರ್ಷದ ದುಷ್ಕರ್ಮಿ 'ತಗೊಳ್ಳಿ ನಿಮ್ಮ ಆಝಾದಿಯನ್ನು' ಎಂದು ಕಿರುಚುತ್ತಾ ಗುಂಡು ಹಾರಿಸುತ್ತಿದ್ದಾಗ ಅಲ್ಲೇ ಸಮೀಪದಲ್ಲಿದ್ದ ಸಶಸ್ತ್ರಪಡೆಯ ಹಲವು ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದ ಬಗ್ಗೆ ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತವಾಗಿದೆ. ಗುಂಡು ಹಾರಿಸಿದ ವ್ಯಕ್ತಿ ತನ್ನನ್ನು ರಾಮಭಕ್ತ ಗೋಪಾಲ ಎಂದು ಕರೆದುಕೊಂಡಿದ್ದು, ಈತ ಗುಂಡು ಹಾರಿಸುವ ಕೆಲವೇ ಕ್ಷಣಗಳ ಮೊದಲು ಫೇಸ್‌ಬುಕ್ ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದ. ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಸುತ್ತಮುತ್ತ ಕಪ್ಪು ಬಣ್ಣದ ಬಾಂಬರ್ ಜಾಕೆಟ್ ಧರಿಸಿಕೊಂಡು ಠಳಾಯಿಸುತ್ತಾ ತನ್ನ ಗುರಿಯನ್ನು ನಿರ್ಧರಿಸುವವನಂತೆ ಪೋಸ್ ಕೊಡುತ್ತಿದ್ದ ಈತ ಸೆಲ್ಫಿ ಕ್ಲಿಕ್ಕಿಸಿದ್ದು ಅದೂ ವೈರಲ್ ಆಗಿದೆ. ಉತ್ತರಪ್ರದೇಶದ ನಿವಾಸಿಯಾಗಿರುವ ಈತನನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ.





