ಯುವ ಸಮಾಜ ಸಾಮಾಜಿಕ ಸುಧಾರಣೆಗಳತ್ತ ಗಮನ ಹರಿಸಬೇಕು: ಶಾಸಕ ಕಾಮತ್
ಮಂಗಳೂರು, ಜ.30: ಕರಾವಳಿಯ ಸಾಮಾಜಿಕ ಕ್ರಾಂತಿಕಾರಿ ಕುದ್ಮುಲ್ ರಂಗರಾವ್ ಸ್ಮಾರಕವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಶ್ರಮಿಸುವುದಾಗಿ ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಕುದ್ಮುಲ್ ರಂಗರಾವ್‌ರ 92ನೇ ಪುಣ್ಯತಿಥಿ ಪ್ರಯುಕ್ತ ಗುರುವಾರ ಅತ್ತಾವರ ಬಾಬುಗುಡ್ಡೆಯಲ್ಲಿರುವ ಅವರ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.
ಸಾಮಾಜಿಕವಾಗಿ ಕುದ್ಮುಲ್ ರಂಗರಾವ್ ಅವರ ಕ್ರಾಂತಿಕಾರಕ ನಡೆಯಿಂದ ಹಿಂದುಳಿದ ವರ್ಗಗಳ ಏಳಿಗೆ ಸಾಧ್ಯವಾಗಿದೆ. ಮಂಗಳೂರಿಗೆ ಬಂದಿದ್ದಾಗ ಸ್ವತಃ ಮಹಾತ್ಮ ಗಾಂಧಿಯವರೇ ಸಾಮಾಜಿಕ ಹೋರಾಟಗಳಲ್ಲಿ ಕುದ್ಮುಲ್ ಅವರು ನನಗೆ ಗುರು ಇದ್ದಂತೆ ಎಂದ್ದಿದ್ದಾರೆ. ಅಂತಹ ಮಹಾನ್ ವ್ಯಕ್ತಿಗೆ ಗೌರವ ನೀಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಕಾಮತ್ ಹೇಳಿದರು.
'ಸ್ಮಾರಕವನ್ನು ಪ್ರವಾಸೋದ್ಯಮ ಕೇಂದ್ರ ಮಾಡುವ ಕನಸು'
ದೆಹಲಿಯಲ್ಲಿ ಮಹಾತ್ಮ ಗಾಂಧಿಯವರ ಸ್ಮಾರಕ ಹೇಗೆ ಪ್ರವಾಸಿ ತಾಣವಾಗಿದೆಯೋ ಹಾಗೇ ಕುದ್ಮುಲ್ ರಂಗರಾವ್ ಅವರ ಸ್ಮಾರಕವನ್ನೂ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರವಾಗಿಸುವ ಕನಸಿದೆ. ಆ ಮೂಲಕ ಹಿಂದುಳಿದ ವರ್ಗದ ಏಳಿಗೆಗಾಗಿ ಶ್ರಮಿಸಿದ ಧೀಮಂತ ವ್ಯಕ್ತಿತ್ವಕ್ಕೆ ಗೌರವ ಸೂಚಿಸುವುದು ನಮ್ಮ ಗುರಿಯಾಗಿದೆ. ಈ ಬಗ್ಗೆ ಸರಕಾರದ ಜೊತೆ ಮಾತುಕತೆ ನಡೆಸಿ ಶ್ರಮಿಸುತ್ತೇನೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂದರ್ಭ ಕಾರ್ಪೊರೇಟರ ಶೈಲೇಶ್ ಶೆಟ್ಟಿ, ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ನ ಅದ್ಯಕ್ಷ ಹೃದಯನಾಥ್ ಬಿ.ಆರ್, ಉಪಾಧ್ಯಕ್ಷ ಶ್ಯಾಮ್ ಕರ್ಕೇರ, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ವಿನಯ್ ನೇತ್ರ ದಡ್ಡಲ್ಕಾಡ್, ರಘರಾಜ್ ಕದ್ರಿ, ಕಿರಣ್ ಕುಮಾರ್ ಕೊಡಿಯಾಲ್‌ಬೈಲ್, ಸೀತಾರಾಮ ಕೋಡಿಕಲ್, ಶಶಿಕಾಂತ್ ಬಿ.ಎಸ್, ಶ್ರೀಧರ್ ಬಿ., ಪ್ರಭಾಕರ್ ಯು, ರವೀಂದ್ರನಾಥ್ ಬಿ., ಅರವಿಂದ, ಪ್ರಮೀಳಾ, ಅನಿತಾ, ನಿಶಾಂತ್ ಉರ್ವ,ರವಿ ಕಾಪಿಕಾಡ್, ಬಿಜೆಪಿ ಮುಖಂಡರಾದ ವಿವೇಕ್ ಶೆಟ್ಟರ್, ಪುಷ್ಪರಾಜ್ ಶೆಟ್ಟಿ, ಪ್ರಮೋದ್, ಪ್ರವೀಣ್ ಕೋಡಿಕಲ್, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡ ಮತ್ತಿತರರು ಉಪಸ್ಥಿತರಿದ್ದರು.







