ಗಾಂಧಿ ಕೇವಲ ಮನುಷ್ಯನಲ್ಲ, ಅವರೊಂದು ಜೀವನ ವಿಧಾನ: ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ

ಬೆಂಗಳೂರು, ಜ.30: ಮಹಾತ್ಮ ಗಾಂಧೀಜಿ ಕೇವಲ ಒಬ್ಬ ಮನುಷ್ಯನಾಗಿಲ್ಲ. ಅವರೊಂದು ನಮ್ಮ ಬದುಕಿನ ವಿಧಾನ ಎಂದು ಹಿರಿಯ ಪತ್ರಕರ್ತ ಎನ್.ಜಗದೀಶ್ ಕೊಪ್ಪ ಹೇಳಿದ್ದಾರೆ.
ನಗರದ ಗಾಂಧೀ ಭವನದಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಹಾಗೂ ಸೇವಾ ಯೋಜನೆ ಕಾರ್ಯಾಗಾರ ಮತ್ತು ಗಾಂಧಿ ಚಿಂತಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಹಿಂದಿನ ತಲೆಮಾರಿನ ಹಿರಿಯರು ಗಾಂಧಿಯ ತತ್ವಗಳನ್ನು ಆರಾಧಿಸಿಕೊಂಡು, ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಇಂದಿನ ನಮ್ಮ ಹೊಸ ತಲೆಮಾರು ಗಾಂಧಿಯ ಜೀವನದ ಆದರ್ಶಗಳನ್ನು, ಅವರ ವಿಚಾರಧಾರೆಗಳನ್ನು, ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಡೆಗೆ ಯೋಚನೆ ಮಾಡಬೇಕಿದೆ. ಅದು ಇಂದಿನ ಸಂದರ್ಭಕ್ಕೆ ಅಗತ್ಯವೂ ಇದೆ ಎಂದರು.
ಭಾರತದಲ್ಲಿ ಶಾಲಾ-ಕಾಲೇಜು ಪಠ್ಯಗಳಲ್ಲಿ ಗಾಂಧಿಯನ್ನು ಕಾಣುತ್ತೇವೆ. ಅವರ ವಿಚಾರಗಳನ್ನು ಕೆಲವನ್ನು ಅಷ್ಟೇ ಇಂದಿನ ಮಕ್ಕಳಿಗೆ ತಿಳಿಸುತ್ತೇವೆ. ಆದರೆ, ವಿದೇಶಗಳಲ್ಲಿ ನಮಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗಾಂಧಿಯನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಗಾಂಧೀಜಿ ನಡೆಸಿದ ಎಲ್ಲ ರೀತಿಯ ಚಳವಳಿಗೂ ಇಂದಿನ ತಲೆಮಾರಿಗೆ ಪ್ರೇರಣೆಯಾಗಿವೆ. ಆದರೆ, ಹಿಂಸಾತ್ಮಕ ಚಳವಳಿಯ ಬದಲಿಗೆ, ಅಹಿಂಸಾ ಮಾರ್ಗದ ಮೂಲಕ ಹೀಗೂ ಚಳವಳಿ ಮಾಡಬಹುದು ಎಂಬುದನ್ನು ಜಗತ್ತಿಗೆ ಮಾದರಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಅವರು ನುಡಿದರು.
ಗಾಂಧೀಯವರ ಅಹಿಂಸಾ ಚಳವಳಿಯ ಆಕರ್ಷಣೆಗೆ ಒಳಗಾದ ವಿದೇಶದ 1,200 ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಈ ಬಗ್ಗೆ ಬರೆದಿದ್ದರು. ಪ್ರೆಂಚ್‌ನ ವಿಜ್ಞಾನಿಯಾದ ಲೂಯಿ ಪಾಶ್ಚರ್ ಗಾಂಧೀಜಿ ಕುರಿತು ಅನ್ನಕ್ಕೆ ಅಧ್ಯಾತ್ಮ ಬೆರೆಸಿದ ಮಹಾತ್ಮನೆಂದು ಬಣ್ಣಿಸಿದ್ದರು ಎಂದು ಮಾಹಿತಿ ನೀಡಿದರು.
ಕುಟುಂಬದೊಳಗೇ ಸಾಕಷ್ಟು ನೋವಿದ್ದರೂ, ಅದನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳದೆ ಇಡೀ ಸ್ವಾತಂತ್ರ ಹೋರಾಟದ ಭಾರವನ್ನು ಗಾಂಧಿ ಹೊತ್ತಿದ್ದರು. ಅವರನ್ನು ನಾವು ಈ ರೀತಿಯ ವಿವಿಧ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಆಗ ನಮಗೆ ದಕ್ಕದ ಮಹಾತ್ಮ ದಕ್ಕುತ್ತಾರೆ ಎಂದು ಹೇಳಿದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದ ಮಾತನಾಡಿ, ಶಿಕ್ಷಣ ಎಂಬುದು ಸಾಧನೆ ಮತ್ತು ಸಾಧನ ಎಂದು ಗಾಂಧೀಜಿ ಹೇಳುತ್ತಿದ್ದರು. ಆದರೆ, ಇಂದಿನ ಶಿಕ್ಷಣ ಹೊಟ್ಟೆ ಬಟ್ಟೆಗೆ ಸೀಮಿತವಾಗಿದೆ. ಗಾಂಧೀಜಿ ಬದುಕಿನ ಕುರಿತು 100 ಸಂಪುಟಗಳಿವೆ. ಅದರಲ್ಲಿ ಒಂದನ್ನಾದರೂ ಓದುವ ಪ್ರಯತ್ನವನ್ನು ನಾವ್ಯಾರು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಎನ್. ಜಗದೀಶ್ ಕೊಪ್ಪ ಅವರ ‘ಗಾಂಧೀಗಿರಿಯ ಫಸಲುಗಳು’ ಕೃತಿಗೆ ಜಯಶ್ರೀ ಟ್ರಸ್ಟ್ ಪುರಸ್ಕಾರ ನೀಡಲಾಯಿತು. ಬಾಪು ಪ್ರಪಂಚ ಸಂಚಿಕೆ ಜತೆಗೆ 5 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಗಾಂಧಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.







