ಲೋಕಾರ್ಪಣೆಗೊಂಡ ಪಂಪ್‌ವೆಲ್ ಫ್ಲೈಓವರ್
ಪಂಪ್‌ವೆಲ್ ಮೇಲ್ಸೇತುವೆ ವಿಳಂಬಕ್ಕೆ ಕಾಂಗ್ರೆಸ್ ಕಾರಣ: ನಳಿನ್

ಮಂಗಳೂರು, ಜ.31: ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಲು ಕಾಂಗ್ರೆಸ್ಸೇ ಕಾರಣ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ. ಬಹು ನಿರೀಕ್ಷೆಯ, ಐತಿಹಾಸಿಕ ಸ್ಮಾರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದ ಪಂಪ್‌ವೆಲ್ ಮೇಲ್ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಜತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿ ಅವರು ಮಾತನಾಡುತ್ತಿದ್ದರು.
2009ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿದ್ದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರದ ನಿಯಮಗಳೇ ಪಂಪ್‌ವೆಲ್ ಮೇಲ್ಸೇತುವೆ ನಿಧಾನಕ್ಕೆ ಪ್ರಮುಖ ಕಾರಣವಾಗಿದ್ದರೆ, ಅದರ ಜತೆಯಲ್ಲಿ ಆಗಿನ ಮಹಾನಗರ ಪಾಲಿಕೆ ಆಡಳಿತ, ಆಗಿನ ಶಾಸಕರು ಹಾಗೂ ಉಸ್ತುವಾರಿ ಸಚಿವರೇ ಕಾರಣ ಎಂದು ದೂರಿದರು. ಇದು ಟೀಕೆಗೆ ಉತ್ತರವಲ್ಲ. ಆದರೆ ನನ್ನ ತಪ್ಪಿಲ್ಲ. ಕಾಂಗ್ರೆಸ್ಸಿನದ್ದೇ ತಪ್ಪು ಎಂದವರು ಪದೇ ಪದೇ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು.
ಟೀಕಾಕಾರರು ಹೇಳುವಂತೆ ಪಂಪ್‌ವಲ್ ಮೇಲ್ಸೇತುವೆ ಕಾಮಗಾರಿ ಆರಂಭ ಆಗಿ 10 ವರ್ಷ ಆಗಿಲ್ಲ. ನನ್ನಲ್ಲಿ ದಾಖಲೆ ಇದೆ. ಸರಕಾರಿ ಅಂಕಿಅಂಶ ಇದೆ. ಜವಾಬ್ದಾರಿ ನೆಲೆಯಲ್ಲಿ ನಾನು ಇದನ್ನೆಲ್ಲಾ ಹೇಳುತ್ತಿದ್ದೇನೆ. ಪಂಪ್‌ವೆಲ್ ಸೇತುವೆಗೆ 2016ರಲ್ಲಿ ಮಹಾವೀರ ವೃತ್ತದಲ್ಲಿದ್ದ ಕಳಸವನ್ನು ತೆರವುಗೊಳಿಸಿ 2017ರಲ್ಲಿ ಕಾಮಗಾರಿ ಆರಂಭಗೊಂಡಿರುವುದು. ಹಾಗಾಗಿ ಇದೀಗ 2 ವರ್ಷ ಎರಡು ತಿಂಗಳಲ್ಲಿ ಕಾಮಗಾರಿ ಮುಗಿದಿದೆ. ಗುತ್ತಿಗೆ ಕಂಪೆನಿ ಕೇಂದ್ರ ಸರಕಾರಕ್ಕೆ ನೀಡಿರುವ ವರದಿಯಂತೆ 2020ರ ಜುಲೈನಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಆದರೆ ಕಂಪನಿ ಕೇಂದ್ರ ಸರಕಾರಕ್ಕೆ ನೀಡಿರುವ ಗಡುವಿಗೆ ಆರು ತಿಂಗಳು ಮುಂಚಿತವಾಗಿ ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಇದಕ್ಕೆ ಕಾರಣ ನಳಿನ್ ಕುಮಾರ್ ಕಟೀಲು ಎಂದವರು ಹೇಳಿದರು.
ಇತ್ತೀಚೆಗೆ ಸತ್ಯಶೋಧನಾ ಸಮಿತಿ ರಚಿಸಿದವರು ಇದೀಗ ಪಂಪ್‌ವೆಲ್ ಪೂರ್ಣಗೊಳ್ಳಲು ಜಿಲ್ಲಾಡಳಿತ ಕಾರಣ ಎಂದು ಹೇಳಿದ್ದಾರೆ. ಆದರೆ ಜಿಲ್ಲಾಡಳಿತ ಇದರ ಮೇಲುಸ್ತುವಾರಿಯನ್ನು ಮಾತ್ರವೇ ವಹಿಸಿತ್ತು. ಅವರು ಪ್ರತಿದಿನ ನನಗೆ ವರದಿ ನೀಡುವಂತೆ ತಿಳಿಸಿದ್ದೆ. ಅಭಿವೃದ್ಧಿಯಲ್ಲಿ ಕನಿಕರ, ಕಾಳಜಿ ಇದ್ದಿದ್ದರೆ ಟೀಕೆ ಮಾಡುವವರು ಬರಬೇಕಿತ್ತು. ಅದು ಬಿಟ್ಟು ಜನರ ಆಶೀರ್ವಾದ ಇಲ್ಲದಿದ್ದರೂ ಹಿಂದಿನ ಬಾಲಿನಿಂದ ಯಾರ್ಯಾರ ಕಾಲು ಹಿಡಿದು ಜನಪ್ರತಿನಿಧಿಯಾದವರು, ಮಾನ ಮರ್ಯಾದೆ ಇಲ್ಲದೆ ಕರೆಯದಲ್ಲಿಗೆ ಹೋಗುವವರು, ಉಳ್ಳಾಲದಲ್ಲಿ ಬಾಕಿ ಆಗಿರುವ 400 ಮನೆಗಳ ಬಗ್ಗೆ ಸತ್ಯ ಶೋಧನೆ ನಡೆಸಲಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನಳಿನ್, ನನ್ನ ಮೇಲೆ ಪ್ರೀತಿ ಇರಿಸಿದವರು ಕೂಡಾ ಕೂಡಾ ಪಂಪ್‌ವೆಲ್‌ಗೆ ಸಂಬಂಧಿಸಿ ಟೀಕೆ ಮಾಡಿದ್ದಾರೆ, ಕಣ್ಣೀರು ಹಾಕಿದ್ದಾರೆ. ಅವರು ನನ್ನ ಪಾಲಿನ ದೇವರು ಎಂದರು.
2016ರ ನವೆಂಬರ್‌ನಲ್ಲಿ ಇಲ್ಲಿದ್ದ ಕಳಸವನ್ನು ತೆರವುಗೊಳಿಸಲು ಮನಪಾದಿಂದ ಒಪ್ಪಿಗೆ ದೊರಕಿತು. ಆಗಿನ ಶಾಸಕ ಜೆ.ಆರ್.ಲೋಬೋ ನಾಟಕ ಮಾಡಿದ್ದರು. ಅವರಿಗೆ ಚಿಂತೆ ಅಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಜಾಗ ಹೋಗುತ್ತದೆ ಎಂಬುದಾಗಿತ್ತು. ನಿಜ, ಅದು ಆಸ್ಪತ್ರೆ ಅದಕ್ಕೆ ಅವಕಾಶ ನೀಡಬೇಕು. ಆದರೆ ರಾಜಕೀಯ ಮಾಡಿರುವುದು ಸರಿಯಲ್ಲ. ಬಳಿಕ ಅಲ್ಲಿ ಅಲ್ಲಿ ಇಂಡಿಯಾನ ಆಸ್ಪತ್ರೆ, ಮಸೀದಿ ಎಲ್ಲಾ ಇದೆ ಅದಕ್ಕಾಗಿ ಅಂಡರ್ ಪಾಸ್ ಬೇಕು ಎಂಬ ಕಾರಣಕ್ಕೆ ಮತ್ತಷ್ಟು ಕಾಮಗಾರಿ ವಿಳಂಬವಾಯಿತು. ನಾನು ಅದಕ್ಕೆಲ್ಲಾ ಅವಕಾಶ ನೀಡಿಯೇ ಕಾಮಗಾರಿ ಮುಗಿಸಿದ್ದೇನೆ ಎಂದವರು ಹೇಳಿದರು.
ತಡವಾಗಿಯಾದರೂ ವೇಗವಾಗಿ ಆಗಿದೆ!
ಟ್ರೋಲ್ ಮಾಡಿದ್ದಕ್ಕಾಗಿ ಕೆಲಸ ಆಗಿರುವುದಲ್ಲ. ಈ ಹಿಂದೆ ನಾನು ಐವನ್, ಲೋಬೋ ಜತೆಯಾಗಿ ಸರ್ಕ್ಯೂಟ್ ಹೌಸ್‌ನಿಂದ ವಾಹನದಲ್ಲಿ ಇಲ್ಲಿಗೆ ಬಂದಿದ್ದೆವು. ಅದಕ್ಕೆ ಕಾರಣ ಪಂಪ್‌ವೆಲ್ ಮೇಲ್ಸೇತುವೆ ಬೇಗ ಆಗಬೇಕೆಂಬ ಕಾರಣಕ್ಕೆ. ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ ಎಂಬ ಉದ್ದೇಶದಿಂದ. ಇವೆಲ್ಲಾ ನನ್ನ ಮೇಲಿನ ಟೀಕೆಗಾಗಿ ಉತ್ತರವಲ್ಲ. ಆದರೆ ಸಂಸದನಾಗಿ ನನ್ನ ಜವಾಬ್ದಾರಿಯನ್ನು ಅರಿತು ನಾನು ಜನರಿಗೆ ಉತ್ತರಿಸುತ್ತಿದ್ದೇನೆ. ಪಂಪ್‌ವೆಲ್ ಸೇತುವೆ ತಡವಾಗಿಯಾದರೂ ವೇಗವಾಗಿ ಕಾಮಗಾರಿ ಮುಗಿದಿದೆ. ಪಂಪ್‌ವೆಲ್ ಸೇತುವೆ ತಡವಾದ್ದರಿಂದ ಬಡವರಿಗೆ ತೊಂದರೆ ಆಗಿಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ಉಳ್ಳಾಲದಲ್ಲಿ 400 ಮನೆಗಳಿಗಾಗಿ ಬಡವರು ಕಾಯುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್‌ನವರು ಪಾದಯಾತ್ರೆ ಯಾವಾಗ ಮಾಡುತ್ತಾರೆ ಎಂದು ನಳಿನ್ ಕುಮಾರ್ ವಂ್ಯಗ್ಯವಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಪಕ್ಷ ಟೀಕೆ, ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ ವಿಳಂಬವೆಂದು ಸಂಸದರನ್ನು ದೂರುವವರು ಕಾಮಗಾರಿ ಆದಾಗ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿರುವುದು ಹಾಸ್ಯಾಸ್ಪದ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕಾಮಗಾರಿಗಳಿಗೆ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲಾಗುತ್ತದೆಯೇ ಹೊರತು ಅಧಿಕಾರಿಗಳಿಗೆ ಅಲ್ಲ. ಹಾಗಿದ್ದಲ್ಲಿ ಅನ್ನಭಾಗ್ಯವನ್ನು ತಂದಿದ್ದು ಕಾಂಗ್ರೆಸ್‌ನವರು ಸಿದ್ದರಾಮಯ್ಯ ಎಂದು ಹೇಳುವ ಬದಲು ಮುಖ್ಯ ಕಾರ್ಯದರ್ಶಿ ಎಂದು ಹೇಳಬೇಕಲ್ಲವೇ ಎಂದು ವ್ಯಂಗ್ಯವಾಡಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಯಾರದ್ದೋ ತಪ್ಪಿಗೆ ಯಾರೋ ತೊಂದರೆ ಅನುಭವಿಸುವ ಪರಿಸ್ಥಿತಿಯನ್ನು ಸಂಸದರು ವಿವರಿಸಿದ್ದಾರೆ. ಶಾಸಕನಾಗಿ ನಾನೂ ಅದನ್ನು ಅನುಭವಿಸುತ್ತಿದ್ದೇನೆ. ಡೀಮ್ಡ್ ಫಾರೆಸ್ಟ್ ಜಾಗದಲ್ಲಿ 900 ಮಂದಿಗೆ ಮನೆ ಕಟ್ಟುವುದಾಗಿ ಹೇಳಿ ಹಕ್ಕು ಪತ್ರ ನೀಡಿ ಇದೀಗ ಕಾನೂನು ಸಮಸ್ಯೆ ಎದುರಾಗಿರುವುದರಿಂದ ಜನರು ನನ್ನಲ್ಲಿ ಪ್ರಶ್ನಿಸುವಂತಾಗಿದೆ ಎಂದು ಹೇಳಿದರು.
ತೆರವುಗೊಳಿಸಲಾದ ಮಹಾವೀರ ವೃತ್ತದ ಕಳಸವನ್ನು ಪಂಪ್‌ವೆಲ್ ವೃತ್ತದ ಜೈನ ಸಮಿತಿಯೊಂದಿಗೆ ಚರ್ಚಿಸಿ ಅದನ್ನು ಮನಪಾ ಕೌನ್ಸಿಲ್‌ನಲ್ಲಿ ಮಂಡಿಸಿ ಸೂಕ್ತ ಮಾರ್ಗದರ್ಶನದ ಮೇರೆಗೆ ಅದನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದರು.
ಈ ಸಂದರ್ಭ ಶಾಸಕರಾದ ಡಾ. ಭರತ್ ಕುಮಾರ್ ಶೆಟ್ಟಿ, ಸಂಜೀವ ಮಠಂದೂರು, ಸುದರ್ಶನ್, ಕಿಶೋರ್ ರೈ, ಸಂದೀಪ್ ಗರೋಡಿ ಮೊದಲಾದವರು ಉಪಸ್ಥಿತರಿದ್ದರು.
ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಮಿಸ್ಟರ್ ಬೀನ್!
ಕೇರಳದ ಚೆಂಡೆ, ವಾದ್ಯ, ಬೊಂಬೆಗಳ ಜತೆಗೆ ಮಿಸ್ಟರ್ ಬೀನ್ ಬೊಂಬೆ ಕೂಡಾ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಗಮನ ಸೆಳೆಯಿತು.
ಸತ್ಯ ಶೋಧನಾ ಸಮಿತಿ ಸತ್ತ ಶೋಧನಾ ಸಮಿತಿ ಆಗಿದೆ!
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ಕಾಲದಲ್ಲಿ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಂಕಿತ ಹಾಕಲಾಗಿತ್ತು. 2009ರಲ್ಲಿ ಯುಪಿಎ ಸರಕಾರ ಬಿಲ್ಡ್ ಅಪರೇಟ್ ಟ್ರಾನ್ಸ್‌ಫರ್ (ಬಿಒಟಿ) ಮಾದರಿಯಲ್ಲಿ ಗುತ್ತಿಗೆ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡ ಕಾರಣದಿಂದಾಗಿಯೇ ಮೇಲ್ಸೇತುವೆ ಕಾಮಗಾರಿಗಳು ನಿಧಾನಗತಿಗೆ ಕಾರಣ. ನವಯುಗ್ ಸಂಸ್ಥೆಗೆ ಗುತ್ತಿಗೆ ನೀಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರಕಾರ. ಟೀಕೆ ಮಾಡುವ ವಿಪಕ್ಷದವರು ಇವರದ್ದೇ ಸರಕಾರ ಇದ್ದಾಗ, ಈ ಬಗ್ಗೆ ಮುತುವರ್ಜಿ ಯಾಕೆ ವಹಿಸಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಳಿನ್ ಕುಮಾರ್ ಕಟೀಲು ಅವರು, ಪಂಪ್‌ವೆಲ್ ಕಾಮಗಾರಿ ಕುರಿತು ವಿಪಕ್ಷದ ಸತ್ಯಶೋಧನಾ ಸಮಿತಿ ಇದೀಗ ಸತ್ತ ಶೋಧನಾ ಸಮಿತಿ ಆಗಿದೆ ಎಂದರು.
ನಾನು ಕಟೀಲು ಕ್ಷೇತ್ರದ ಪರಮ ಭಕ್ತ. ಹಾಗಾಗಿಯೇ ಕ್ಷೇತ್ರದಲ್ಲಿ ಬ್ರಹ್ಮಕಲಶದ ಮರುದಿನವೇ ಇಲ್ಲಿ ಉದ್ಘಾಟನೆಯ ಭಾಗ್ಯ ದೊರಕಿದೆ. ನನಗೆ ಯಾರೆಲ್ಲಾ ಟೀಕೆ ಮಾಡಿದ್ದಾರೆ ಅವರಿಗೆಲ್ಲಾ ಏನಾಗುತ್ತದೆ ನಾನು ಹೇಳುವುದಿಲ್ಲ ಎಂದು ನಳಿನ್ ಹೇಳಿದರು.













