ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ಪ್ರಗತಿ ಶೇ. 6ರಿಂದ 6.5ಕ್ಕೇರಿಕೆ: ಆರ್ಥಿಕ ಸಮೀಕ್ಷೆ

ಹೊಸದಿಲ್ಲಿ,ಜ.31: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದರು. ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ಅಥವಾ ಒಟ್ಟು ಆಂತರಿಕ ಉತ್ಪನ್ನ ಪ್ರಗತಿ ದರ ಶೇ.5ರಷ್ಟಾಗಲಿದೆ ಎಂದು ಅಂದಾಜಿಸಲಾಗಿದ್ದು,ಇದು ಕಳೆದ 11 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠವಾಗಿದೆ. ನಿರುದ್ಯೋಗ ಸಮಸ್ಯೆ ಇನ್ನಷ್ಟು ಹದಗೆಡುತ್ತಿದೆ ಎನ್ನುವುದನ್ನೂ ವರದಿಯು ಬೆಟ್ಟು ಮಾಡಿದೆ. ಆದರೆ ಎ.1ರಿಂದ ಆರಂಭಗೊಳ್ಳುವ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಪ್ರಗತಿ ದರವು ಚೇತರಿಸಿಕೊಂಡು ಶೇ.6ರಿಂದ ಶೇ.6.5ಕ್ಕೆ ಏರಲಿದೆ ಎಂದು ಮುನ್ನಂದಾಜಿಸಿರುವ ವರದಿಯು,ಬೆಳವಣಿಗೆಯನ್ನು ಹೆಚ್ಚಿಸಲು ಬಜೆಟ್‌ನಲ್ಲಿ ವಿತ್ತೀಯ ಕೊರತೆ ಗುರಿಯನ್ನು ಸಡಿಲಿಸುವಂತೆ ಸರಕಾರಕ್ಕೆ ಸಲಹೆ ನೀಡಿದೆ.
2020-21ನೇ ಸಾಲಿನ ಕೇಂದ್ರ ಮುಂಗಡಪತ್ರ ಮಂಡನೆಯ ಮುನ್ನಾದಿನ ಬಿಡುಗಡೆಗೊಂಡಿರುವ ಸಮೀಕ್ಷೆಯು ಆಹಾರ ಸಬ್ಸಿಡಿಗಳನ್ನು ಕಡಿತ ಮಾಡುವಂತೆ ಕರೆ ನೀಡಿದೆ. ಇದೇ ವೇಳೆ ದೇಶದಲ್ಲಿ ಸಂಪತ್ತು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಜಿಡಿಪಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಉದ್ಯಮಿಗಳನ್ನು ಗೌರವಿಸುವಂತೆಯೂ ಕಿವಿಮಾತು ಹೇಳಿದೆ.
ದೇಶವು 2008-09ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಮೀಕ್ಷೆಯು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ‘ವಿಶ್ವಕ್ಕಾಗಿ ಭಾರತದಲ್ಲಿ ತಯಾರಿಸಿ’ ಎಂಬ ಪರಿಕಲ್ಪನೆಯೊಂದಿಗೆ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವಂತೆ ಸೂಚಿಸಿದೆ.
ವಿತ್ತೀಯ ಕ್ಷೇತ್ರದಲ್ಲಿ ಶೀಘ್ರವೇ ಸುಧಾರಣೆಗಳನ್ನು ತರಲು ಸರಕಾರವು ತನಗೆ ದೊರಕಿರುವ ಭಾರೀ ಜನಾದೇಶವನ್ನು ಬಳಸಿಕೊಳ್ಳಬೇಕು ಮತ್ತು ಈ ಸುಧಾರಣೆಗಳು 2020-21ನೇ ಸಾಲಿನಲ್ಲಿ ಆರ್ಥಿಕತೆಯು ಪುಟಿದೇಳುವುದನ್ನು ಸಾಧ್ಯವಾಗಿಸುತ್ತವೆ ಎಂದು ವಿತ್ತ ಸಚಿವಾಲಯಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಸಿದ್ಧಗೊಳಿಸಿರುವ ಸಮೀಕ್ಷೆಯು ಹೇಳಿದೆ. ಹೊಸ ನೂರು ರೂಪಾಯಿ ನೋಟಿನ ಲ್ಯಾವೆಂಡರ್ ಬಣ್ಣದಲ್ಲಿರುವ ಆರ್ಥಿಕ ಸಮೀಕ್ಷೆ ವರದಿಯು ಸಂಪತ್ತು ಸೃಷ್ಟಿಯನ್ನು ಮುಖ್ಯ ವಿಷಯವನ್ನಾಗಿಸಿಕೊಂಡಿದೆ.
ಈ ಹಿಂದೆ ಪ್ರತಿಪಾದಿಸಿರುವಂತೆ ಸರಕಾರವು ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದಿರುವ ವರದಿಯು,ಇದಕ್ಕಾಗಿ ವಿತ್ತೀಯ ಕೊರತೆ ಗುರಿಯನ್ನು ಸಡಿಲಿಸುವುದನ್ನು ಪರಿಗಣಿಸಬಹುದಾಗಿದೆ ಎಂದಿದೆ.
ಸೀತಾರಾಮನ್ ಅವರು ತನ್ನ 2019-20ನೇ ಸಾಲಿನ ಮುಂಗಡಪತ್ರದಲ್ಲಿ ಜಿಡಿಪಿಯ ಶೇ.3.3ರಷ್ಟು ವಿತ್ತೀಯ ಕೊರತೆ ಗುರಿಯನ್ನು ಅಂದಾಜಿಸಿದ್ದರು,ಆದರೆ ಆರ್ಥಿಕ ಮಂದಗತಿಯಿಂದಾಗಿ ಆದಾಯ ಸಂಗ್ರಹದಲ್ಲಿ ಕುಸಿತ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಉತ್ತೇಜಕ ಕ್ರಮವಾಗಿ ಸರಕಾರವು ತೆರಿಗೆ ರಿಯಾಯಿತಿಗಳನ್ನು ಒದಗಿಸಿದ್ದರಿಂದ ಅದು ಶೇ.3.8ಕ್ಕೆ ಕುಸಿದಿದೆ. ಇದರೊಂದಿಗೆ ಸರಕಾರವು ಸತತ ಮೂರನೇ ವರ್ಷ ತನ್ನ ವಿತ್ತೀಯ ಕೊರತೆ ಗುರಿಯನ್ನು ತಲುಪುವಲ್ಲಿ ವಿಫಲಗೊಂಡಂತಾಗಿದೆ.
ಆರ್ಥಿಕತೆಯು ಒಮ್ಮೆ ಚುರುಕು ಪಡೆದುಕೊಂಡರೆ ತನ್ನ ವೆಚ್ಚಗಳನ್ನು ಕ್ರೋಢೀಕರಿಸಲು ಸರಕಾರವು ಕ್ರಮವನ್ನು ಕೈಗೊಳ್ಳಬಹುದು. ಈ ಹಿಂದೆ ಹಲವಾರು ಆರ್ಥಿಕತೆಗಳು ಈ ಮಾರ್ಗವನ್ನು ಅನುಸರಿಸಿವೆ ಎಂದಿರುವ ಸಮೀಕ್ಷೆಯು, 1.84 ಲ.ಕೋ.ರೂ.ಗಳಷ್ಟಿರುವ ಆಹಾರ ಸಬ್ಸಿಡಿಯನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸುವುದರಿಂದ ವಿತ್ತೀಯ ಕೊರತೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದಿದೆ.
ಸಂಪತ್ತು ಸೃಷ್ಟಿಯಾಗುವಂತೆ ಮಾಡಲು ಬಂಡವಾಳ ವೆಚ್ಚದ ಹೆಚ್ಚಳಕ್ಕೆ ಮತ್ತು ಕಂದಾಯ ವೆಚ್ಚದ ಕಡಿತಕ್ಕೆ ವರದಿಯು ಹೆಚ್ಚಿನ ಒತ್ತು ನೀಡಿದೆ. ಅಂದರೆ ಮುಖ್ಯವಾಗಿ ಬಳಕೆದಾರ ವೆಚ್ಚದಿಂದ ಪ್ರೇರಿತ ಆರ್ಥಿಕ ಬೆಳವಣಿಗೆಯು ಈಗ ಹೆಚ್ಚಿನ ಹೂಡಿಕೆಗಳಿಂದ ಬರಬೇಕಿದೆ. ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರದ ಪುನಃಶ್ಚೇತನದ ಬಗ್ಗೆ ಗಮನವನ್ನು ಕೇಂದ್ರೀಕರಿಸುವ ಮೂಲಕ ಹೂಡಿಕೆಗಳಿಂದ ಪ್ರೇರಿತ ಬೆಳವಣಿಗೆಗೆ ಒತ್ತು ನೀಡಬೇಕಿದೆ ಎಂದು ವರದಿಯು ಹೇಳಿದೆ.
ಉದ್ಯಮ ನಿರ್ವಹಣೆಯನ್ನು ಸುಗಮಗೊಳಿಸಲು ಕ್ರಮಗಳನ್ನು ಸೂಚಿಸಿರುವ ವರದಿಯು,ರಫ್ತುಗಳನ್ನು ಉತ್ತೇಜಿಸಲು ಬಂದರುಗಳಲ್ಲಿಯ ಅಡೆತಡೆಗಳನ್ನು ನಿವಾರಿಸಬೇಕು ಮತ್ತು ಉದ್ಯಮಾರಂಭ,ಆಸ್ತಿ ನೋಂದಣಿ,ತೆರಿಗೆ ಪಾವತಿ ಮತ್ತು ಗುತ್ತಿಗೆಗಳ ಅನುಷ್ಠಾನ ಇವುಗಳನ್ನು ಸುಲಭಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದಿದೆ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಆಡಳಿತದಲ್ಲಿ ಸುಧಾರಣೆ ಮತ್ತು ವಿಶ್ವಾಸ ನಿರ್ಮಾಣಕ್ಕಾಗಿ ಮಾಹಿತಿಗಳನ್ನು ಹೆಚ್ಚು ಬಹಿರಂಗಗೊಳಿಸುವ ಅಗತ್ಯಕ್ಕೂ ಸಮೀಕ್ಷೆಯು ಕರೆ ನೀಡಿದೆ.
ಹೂಡಿಕೆಯನ್ನು,ನಿರ್ದಿಷ್ಟವಾಗಿ ಭವಿಷ್ಯದ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳಡಿ ಹೂಡಿಕೆಯನ್ನು ಹೆಚ್ಚಿಸಲು ಕೈಗೊಳ್ಳಲಾಗಿರುವ ನಿರ್ಣಾಯಕ ಕ್ರಮಗಳು 2019-20ನೇ ಸಾಲಿನ ಉತ್ತರಾರ್ಧದಲ್ಲಿ ಮತ್ತು 2020-21ನೇ ಸಾಲಿನಲ್ಲಿ ಬೆಳವಣಿಗೆಗೆ ಪೂರಕವಾಗಿವೆ ಎಂದು ವರದಿಯು ಹೇಳಿದೆ.







