ಜಾಗತೀಕರಣಕ್ಕೆ ಯುವ ವಕೀಲರು ಸಜ್ಜಾಗಿ: ನ್ಯಾ.ಕೆ.ಎನ್.ಫಣೀಂದ್ರ

ಉಡುಪಿ, ಜ.31: ಮುಂಬರುವ ದಿನಗಳಲ್ಲಿ ವಕೀಲಿ ವೃತ್ತಿ ಜಾಗತೀಕರಣ ಗೊಳ್ಳುತ್ತಿದೆ. ವಿದೇಶದ ವಕೀಲರು ಇಲ್ಲಿಗೆ ಬಂದು ವಕಾಲತು ಮಾಡಬಹುದು, ಅದೇ ರೀತಿ ಇಲ್ಲಿನ ವಕೀಲರು ವಿದೇಶಕ್ಕೆ ಹೋಗಬಹುದು. ಈ ನಿಟ್ಟಿನಲ್ಲಿ ಸವಾಲುಗಳನ್ನು ಎದುರಿಸಲು ನಮ್ಮ ಯುವ ವಕೀಲರು ಸಜ್ಜುಗೊಳ್ಳಬೇಕಿದೆ. ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿರಬೇಕು ಎಂದು ಬೆಂಗಳೂರಿನ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾ.ಕೆ.ಎನ್.ಫಣೀಂದ್ರ ಯುವ ವಕೀಲರಿಗೆ ಕಿವಿಮಾತು ಹೇಳಿದ್ದಾರೆ.
ಶುಕ್ರವಾರ ಉಡುಪಿ ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರು ವಕೀಲರ ಸಂಘದಲ್ಲಿ ಉಡುಪಿಯ ವಕೀಲರನ್ನುದ್ದೇಶಿಸಿ ಮಾತನಾಡುತಿದ್ದರು.
ಸಮಾಜದಲ್ಲಿ 30ರಿಂದ 35ವರ್ಷ ವಯಸ್ಸಿನ ಯುವಕರೇ ಹೆಚ್ಚು ದಾರಿ ತಪ್ಪುತಿದ್ದಾರೆ. ಇದನ್ನು ತಡೆಯುವ ಜವಾಬ್ಧಾರಿ ನ್ಯಾಯಾಂಗದ ಮೇಲಿದ್ದು, ಯುವ ವಕೀಲರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದವರು ಸಲಹೆ ನೀಡಿದರು.
ಸಮಾಜದ ಸ್ವಾಸ್ಥ ಕಾಪಾಡಿ, ಉತ್ತಮ ಸಮಾಜ ನಿರ್ಮಾಣಗೊಳ್ಳಲು ಯುವ ವಕೀಲರು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ ಎಂದ ನ್ಯಾ. ಫಣೀಂದ್ರ, ಉಡುಪಿ ಜಿಲ್ಲೆಯ ವಕೀಲರು ಬುದ್ಧಿವಂತರು ಜೊತೆಗೆ ವೃತ್ತಿಯಲ್ಲಿ ಶ್ರಮ ಮತ್ತು ಬದ್ಧತೆಯನ್ನು ಹೊಂದಿದ್ದಾರೆ ಎಂದು ಪ್ರಶಂಸಿಸಿದರು.
ನಾನು ಉಡುಪಿಯಲ್ಲಿ ಜಿಲ್ಲಾ ನ್ಯಾಯಾಧೀಶನಾಗಿದ್ದಾಗ ಲೋಕ ಆದಾಲತ್ ಗೆ ಸಂಬಂಧಿಸಿ ಇಲ್ಲಿನ ವಕೀಲ ವೃಂದ ಸಾಕಷ್ಟು ಸಹಕಾರ ಕೊಟ್ಟಿದ್ದರು. ಲೋಕಾ ಆದಾಲತ್ ವ್ಯಾಜ್ಯ ವಿಲೇಯಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು ಎಂದು ಉಡುಪಿಯ ದಿನಗಳನ್ನು ನೆನಪಿಸಿಕೊಂಡರು.
ಜಿಲ್ಲಾ ನ್ಯಾಯಾಲಯದ ಅಂದಿನ ಸಾಧನೆಗೆ ಅಂದಿನ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಶ್ಲಾಘನೆ ವ್ಯಕ್ತಪಡಿಸಿದ್ದರು. ಅದಕ್ಕೆ ಕಾರಣ ಇಲ್ಲಿನ ವಕೀಲ ವೃಂದದ್ದಾಗಿತ್ತು. ಸಮಾಜದ ಆರೋಗ್ಯ ಕಾಪಾಡಲು ವಕೀಲರು ಮತ್ತು ನ್ಯಾಯಾಂಗ ವ್ಯವಸ್ಥೆಯಿಂದ ಸಾಧ್ಯ ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ ಜೋಷಿ ಅಧ್ಯಕ್ಷತೆ ವಹಿಸಿದ್ದು, ನ್ಯಾ.ಫಣೀಂದ್ರರನ್ನು ಸನ್ಮಾನಿಸಿದರು. ವಕೀಲರ ಸಂಘ ಅಧ್ಯಕ್ಷ ದಿವಾಕರ ಎಂ. ಶೆಟ್ಟಿ ಸ್ವಾಗತಿಸಿದರು. ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲೆ ಮೇರಿ ಶ್ರೇಷ್ಠ ಅತಿಥಿಗಳನ್ನು ಪರಿಚಯಿಸಿದರು. ಲೋಕಾಯುಕ್ತದ ವಿಶೇಷ ಅಭಿಯೋಜಕ ಟಿ.ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







