ಫೆ.1: ಶಂಕಿತ ಉಗ್ರ ಆದಿತ್ಯ ರಾವ್ ನ್ಯಾಯಾಲಯಕ್ಕೆ ಹಾಜರು
ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ

ಆದಿತ್ಯ ರಾವ್
ಮಂಗಳೂರು, ಜ.31: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕವಿರಿಸಿದ ಪ್ರಕರಣದ ಆರೋಪಿ, ಶಂಕಿತ ಉಗ್ರ ಆದಿತ್ಯ ರಾವ್ ನ ಪೊಲೀಸ್ ಕಸ್ಟಡಿ ಫೆ.1ರಂದು ಮುಕ್ತಾಯಗೊಳ್ಳಲಿದೆ. ಹಾಗಾಗಿ ಶನಿವಾರ ಬೆಳಗ್ಗೆ ನಗರದ 6ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಗತ್ಯವಿದ್ದಲ್ಲಿ ಮತ್ತೆ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಪೊಲೀಸ್ ತನಿಖಾ ತಂಡವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಆದಿತ್ಯ ರಾವ್ ಜ.20ರಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕವಿರಿಸಿದ್ದ. ಇದು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಜ.22ರಂದು ಬೆಂಗಳೂರಿನಲ್ಲಿ ಆರೋಪಿಯು ಪೊಲೀಸರಿಗೆ ಶರಣಾಗಿದ್ದ. ಈ ಪ್ರಕರಣ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರಣ ಮಂಗಳೂರು ಉತ್ತರ ವಲಯ ಎಸಿಪಿ ನೇತೃತ್ವದ ತನಿಖಾ ತಂಡವು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಜ.23ರಂದು 6ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್. ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ಪೊಲೀಸರು ಆತನ ಜೊತೆ ಸ್ಥಳ ಮಹಜರು ನಡೆಸಿ ಮಾಹಿತಿ ಕಲೆ ಹಾಕಿದ್ದರು.





