ಆಗುಂಬೆ ಘಾಟಿ ಏಳನೆಯ ಕ್ರಾಸ್‌ನಲ್ಲಿ ಮಗು ಪತ್ತೆ !
ತೀರ್ಥಹಳ್ಳಿ, ಜ.31: ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೆಯ ತಿರುವಿನಲ್ಲಿ ಹೆಣ್ಣು ಮಗುವೊಂದು ಗುರುವಾರ ರಾತ್ರಿ ಪತ್ತೆಯಾಗಿರುವುದು ವರದಿಯಾಗಿದೆ.
ನಿನ್ನೆ ರಾತ್ರಿ ಒಂಬತ್ತೂವರೆಯ ಸುಮಾರಿಗೆ ಕಾರೊಂದು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿರುವಾಗ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗು ಅಳುತ್ತಾ ನಿಂತಿತೆನ್ನಲಾಗಿದೆ. ಇದನ್ನು ಗಮನಿಸಿದ ಕಾರು ಚಾಲಕ ತಕ್ಷಣ ಇಳಿದು ಮಗುವನ್ನು ಕರೆದುಕೊಂಡು ಹೋಗಿ ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗುವಿನ ಪೋಷಕರು ಯಾರು ಎಂದು ಪೋಲಿಸರು ಪತ್ತೆ ಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಎನ್‌ಆರ್ ಪುರ ಮೂಲದವರಾದ ಬೀನು ಎಂಬುವವರು ಕುಟುಂಬ ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು ಎನ್ನಲಾಗಿದೆ. ಅವರು ಪ್ರವಾಸದಿಂದ ಹಿಂದಿರುಗುತ್ತಿದ್ದಾಗ ರಾತ್ರಿ ಸಮಯವಾಗಿದ್ದರಿಂದ ಕಾರಿನಲ್ಲಿದ್ದ ಪೋಷಕರು ನಿದ್ರೆಗೆ ಜಾರಿದ್ದು, ಈ ವೇಳೆ ಕಾರಿನ ಹಿಂದಿನ ಡೋರ್ ಅಚಾನಕ್ ತೆರೆದಿದ್ದರಿಂದ ಮಗು ಘಾಟಿಯ ಏಳನೆಯ ತಿರುವಿನಲ್ಲಿ ರಸ್ತೆಗೆ ಬಿದ್ದಿದೆ. ಆದರೆ ಪೋಷಕರು ನಿದ್ರೆಯಲ್ಲಿದ್ದುದರಿಂದ ಇದು ಅವರ ಗಮನಕ್ಕೇ ಬರಲೇ ಇಲ್ಲ ಎನ್ನಲಾಗಿದೆ. ಕಾರಿನಲ್ಲಿದ್ದವರು ಎನ್ ಆರ್ ಪುರ ಹೋಗುವಾಗ ಮಾರ್ಗ ಮಧ್ಯೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡಾಗ ಮಗು ಇಲ್ಲದಿರುವುದು ಗಮನಕ್ಕೆ ಬಂತೆನ್ನಲಾಗಿದೆ. ಇದರಿಂದ ಗಾಬರಿಗೊಂಡು ಪೋಷಕರು ತಕ್ಷಣ ಅದೆ ಮಾರ್ಗವಾಗಿ ಮಗುವನ್ನು ಹುಡುಕುತ್ತಾ ವಾಪಸ್ ಬಂದಿದ್ದಾರೆ. ಕೊನೆಗೆ ಆಗುಂಬೆ ಫಾರೆಸ್ಟ್ ಗೇಟ್ ತಲುಪಿದಾಗ ಮಗು ಪೊಲೀಸ್ ಠಾಣೆಯಲ್ಲಿ ಇರುವ ವಿಷಯ ತಿಳಿದರು. ಅದರಂತೆ ಠಾಣೆಗೆ ತೆರಳಿದ್ದಾರೆ. ಪೊಲೀಸರು ತಂದೆತಾಯಿಯರಿಗೆ ಎಚ್ಚರಿಕೆ ನೀಡಿ ಮಗುವನ್ನು ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.







