ಕಂದಾಯ ಇಲಾಖೆ ನೌಕರರ ನೈಪುಣ್ಯತೆ ವೃದ್ಧಿಯಾಗಲಿ: ನ್ಯಾ.ಜೋಷಿ

ಉಡುಪಿ, ಜ.31: ಕಂದಾಯ ಇಲಾಖೆಯ ನೌಕರರು ಬದಲಾಗುವ ಕಾರ್ಯ ವಿಧಾನಗಳು ಮತ್ತು ನೂತನವಾಗಿ ಜಾರಿಗೆ ಬರುವ ಎಲ್ಲಾ ತಾಂತ್ರಿಕ ನೈಪುಣ್ಯತೆಯನ್ನು ಗಳಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಶೀಘ್ರದಲ್ಲಿ ಸೇವೆಗಳನ್ನು ಒದಗಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾದಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಮತ್ತು ಕಂದಾಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗಳು ಪ್ರಸಕ್ತ ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಕಾರ್ಯ ವಿಧಾನದಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು, ದಿನನಿತ್ಯದ ಕೆಲಸದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಕಾನೂನುಬದ್ದವಾಗಿ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು. ಭೂಮಿ ಯೋಜನೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಜಿಲ್ಲೆಯ ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ. ಇದು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ನ್ಯಾ. ಜೋಷಿ ಆಶಿಸಿದರು.
ನ್ಯಾಯಾಂಗ ಇಲಾಖೆಗೆ ಸಂಬಂದಿಸಿದಂತೆ, ರಾಜ್ಯದಲ್ಲಿ 14 ಲಕ್ಷದಷ್ಟು ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯಲ್ಲಿ 29,000 ಪ್ರಕರಣಗಳು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದೆ. ಇವುಗಳಲ್ಲಿ ಹೆಚ್ಚಿನವು ಸಿವಿಲ್ ವ್ಯಾಜ್ಯಗಳಾಗಿವೆ. ಪ್ರಸ್ತುತ ಭೂಮಿ ಮತ್ತು ಪಹಣಿಗೆ ಸಂಬಂದಪಟ್ಟ ದಾಖಲೆ ಗಳನ್ನು ಡಿಜಿಟಲ್ ರೂಪದಲ್ಲಿ ನೀಡುತ್ತಿದ್ದು, ನ್ಯಾಯಾಂಗ ಮತ್ತು ಕಂದಾಯ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ನೀಡುವ ಸೇವೆಗಳು ತಾಂತ್ರಿಕವಾಗಿ ಜೋಡಣೆ ಯಾದಲ್ಲಿ ಸಾವಿರಾರು ಸಿವಿಲ್ ಪ್ರಕರಣಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲು ಸಾದ್ಯವಾಗಲಿದೆ. ಇದರಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕರಿಗೆ ಶೀಘ್ರದಲ್ಲಿ ನ್ಯಾಯ ಒದಗಿಸಲು ಸಾಧ್ಯ ಎಂದು ನ್ಯಾ.ಸಿ.ಎಂ. ಜೋಷಿ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ನೌಕರರು ಕಚೇರಿಗೆ ಆಗಮಿಸುವ ಸಾರ್ವಜನಿಕರಲ್ಲಿ ಯಾವುದೇ ಲಿಂಗ, ಜಾತಿ, ಧರ್ಮ, ಪ್ರಾದೇಶಿಕತೆ ಭೇದ ತೋರದೇ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಾರ್ಯ ನಿರ್ವಹಿಸುವಾಗ ಕಾನೂನಿನಡಿಯಲ್ಲಿ ಮಾನವೀಯತೆಯನ್ನು ತೋರಬೇಕು. ನಿಯಮಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಿ ಎಂದು ಅವರು ಹೇಳಿದರು.
ಭೂಮಿ ಮತ್ತು ಮ್ಯುುಟೇಶನ್ ವಿತರಣೆಯಲ್ಲಿ ಡಿಸೆಂಬರ್‌ನಲ್ಲಿ ರಾಜ್ಯದಲ್ಲೆ ಪ್ರಥಮ ಸ್ಥಾನ ಪಡೆದ ಉಡುಪಿ ತಾಲೂಕು, ತೃತೀಯ ಸ್ಥಾನ ಪಡೆದ ಬ್ರಹ್ಮಾವರ, 5ನೇ ಸ್ಥಾನ ಪಡೆದ ಕಾಪು ಹಾಗೂ 6 ನೇ ಸ್ಥಾನ ಪಡೆದ ಕುಂದಾಪುರ ತಾಲೂಕು ಕಚೇರಿಗಳಿಗೆ ಅಭಿನಂದನಾ ಪತ್ರಗಳನ್ನು ನ್ಯಾ.ಸಿ.ಎಂ.ಜೋಷಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾ ಭೂದಾಖಲೆಗಳ ಉಪ ನಿರ್ದೇಶಕ ಕುಸುಮಾಧರ್, ಸಂಪನ್ಮೂಲ ವ್ಯಕ್ತಿ ನಿವೃತ್ತ ತಹಶೀಲ್ದಾರ್ ಮುರಳೀಧರ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಬಿ.ಸದಾಶಿದ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.









