ಕೊರೋನ ವೈರಸ್ ಭೀತಿ: ಕೇಂದ್ರ- ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಂದ ಚರ್ಚೆ
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.31: ನೋವಲ್ ಕೊರೋನ ವೈರಸ್ ಕಾಯಿಲೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಜೊತೆ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಈಗಾಗಲೇ ಪ್ರಪಂಚದಾದ್ಯಂತ 7818 ಪ್ರಕರಣಗಳು ವರದಿಯಾಗಿದ್ದು, ಚೀನಾ ದೇಶದಲ್ಲಿಯೇ 7711 ಪ್ರಕರಣಗಳು ಹಾಗೂ 170 ಮರಣಗಳು ವರದಿಯಾಗಿದ್ದು, 20 ರಾಷ್ಟ್ರಗಳಲ್ಲಿ ಈ ಸೋಂಕು ವರದಿಯಾಗಿದೆ.
ಮುಂಜಾಗ್ರತಾ ಕ್ರಮಗಳು: ವಿಮಾನ ನಿಲ್ದಾಣಗಳಲ್ಲಿ ಚೀನಾ ದೇಶದಿಂದ ಬರುವ ಪ್ರಯಾಣಿಕರ ತಪಾಸಣೆಯನ್ನು ಇನ್ನೂ ಉತ್ತಮಗೊಳಿಸುವುದು ಹಾಗೂ ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿಯೂ ಪ್ರಯಾಣಿಕರ ತಪಾಸಣೆ ಕೈಗೊಳ್ಳಬೇಕು.
ಚೀನಾ ದೇಶದ ವುಹಾನ್ ನಗರದಿಂದ 2020ರ ಜ.15 ರಿಂದ ಬಂದಿರುವ/ ಬರುವಂತಹ ಎಲ್ಲ ಪ್ರಯಾಣಿಕರನ್ನು ಅನುಸರಣೆ ಮಾಡಲು ಕ್ರಮ ವಹಿಸಬೇಕು ಹಾಗೂ ಸಂಶಯಾಸ್ಪದ ಪ್ರಕರಣಗಳಲ್ಲಿ ಪರೀಕ್ಷೆಗೆ ಒಳಪಡಿಸಿ ನಿಯಮಾನುಸಾರ 28 ದಿನಗಳವರೆಗೂ ಅನುಸರಣೆ ಮಾಡಬೇಕು.
ಗೃಹಮಟ್ಟದಲ್ಲಿ ಹಾಗೂ ಸಮುದಾಯದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಶಿಕ್ಷಣದ ಮೂಲಕ ಸಾರ್ವಜನಿಕರಿಗೆ ತಿಳಿಸಲು ನಿರ್ಧರಿಸಲಾಯಿತು. ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಈಗಾಗಲೇ 15 ಹಾಸಿಗೆಗಳು ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಸುಸಜ್ಜಿತವಾದ ಐಸೋಲೇಷನ್ ವಾರ್ಡ್ ಅನ್ನು ತೆರೆಯಲಾಗಿದೆ. ಇದರ ಜೊತೆಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿಯೂ ಪ್ರತ್ಯೇಕ ವಾರ್ಡ್ಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು.
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಐದು ಹಾಸಿಗೆಯುಳ್ಳ ಸುಸಜ್ಜಿತವಾದ ಐಸೋಲೇಷನ್ ವಾರ್ಡ್ಗಳನ್ನು ತೆರೆಯಬೇಕು. 2020ರ ಜ.30ರಂದು ರಾಜ್ಯದಲ್ಲಿ 21 ಪ್ರಯಾಣಿಕರು ತೀವ್ರ ನಿಗಾವಣೆಯಲ್ಲಿದ್ದು, ಸಂಶಯಾಸ್ಪದ 10 ಪ್ರಯಾಣಿಕರನ್ನು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.
11 ಪ್ರಯಾಣಿಕರನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ಅನುಸರಣೆ ಮಾಡಲಾಗುತ್ತಿದೆ. 13 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ನಾಲ್ಕು ಮಾದರಿಗಳು ನೋವಲ್ ಕೊರೋನ ವೈರಸ್ ನೆಗೆಟಿವ್ ವರದಿ ಬಂದಿದೆ ಎಂಬ ಮಾಹಿತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸರಕಾರಕ್ಕೆ ನೀಡಲಾಯಿತು.
ವಿಡಿಯೋ ಕಾನ್ಫರೆನ್ಸ್ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು, ಸಹ ನಿರ್ದೇಶಕರು, ಜಯದೇವ ಆಸ್ಪತ್ರೆಯ ನಿರ್ದೇಶಕರು ಹಾಗೂ ಎಲ್ಲ ಪ್ರಮುಖ ಆಸ್ಪತ್ರೆಗಳ ನಿರ್ದೇಶಕರು ಭಾಗವಹಿಸಿದ್ದರು.







