ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪ: ಕ್ಯಾಬ್ ಚಾಲಕ ಬಂಧನ

ಬೆಂಗಳೂರು, ಜ.31: ಉದ್ಯಮಿ ಮೊಬೈಲ್ ಕಸಿದು ಯುವತಿಯರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇರೆಗೆ ಕ್ಯಾಬ್ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಿಥುನ್ ಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ಜನವರಿ 16 ರಂದು ಹೆಬ್ಬಾಳದ ಕೆಂಪಾಪುರ ಬಳಿ ಉದ್ಯಮಿ ಕಾರು ಮತ್ತು ಆರೋಪಿಯ ಕ್ಯಾಬ್ ನಡುವೆ ಸಣ್ಣ ಅಪಘಾತ ಆಗಿತ್ತು. ಆ ವೇಳೆ ಉದ್ಯಮಿಯ ಮೊಬೈಲ್ ಕಸಿದುಕೊಂಡ ಕ್ಯಾಬ್ ಚಾಲಕ ಮಿಥುನ್ ಕುಮಾರ್ ಪರಾರಿಯಾಗಿದ್ದ. ಇದಾದ ನಂತರ ಚಾಲಕನನ್ನು ಸಂಪರ್ಕಿಸಿದರೂ ಉದ್ಯಮಿಗೆ ಕಾರು ಚಾಲಕ ತನ್ನ ಮೊಬೈಲ್ ಹಿಂದುರಿಗಿಸದೇ, ಇಂದು, ನಾಳೆ ನೀಡುವುದಾಗಿ ಸತಾಯಿಸುತ್ತಿದ್ದ. ಅಲ್ಲದೆ, ಉದ್ಯಮಿಯ ಮೊಬೈಲ್‌ನಲ್ಲಿದ್ದ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡು, ಯುವತಿಯರಿಗೆ ಅಸಭ್ಯವಾಗಿ, ಅಶ್ಲೀಲವಾಗಿ ಸಂದೇಶ ಕಳಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈ ವಾಸ್ತವ ಅರಿಯದ ಉದ್ಯಮಿಯ ಗೆಳತಿಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಉದ್ಯಮಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ, ಆರೋಪಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂದಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.





