ಆಹಾರ ಸಬ್ಸಿಡಿ ಕಡಿತ,ಪಡಿತರ ಬೆಲೆ ಪರಿಷ್ಕರಣೆ ಅಗತ: ಆರ್ಥಿಕ ಸಮೀಕ್ಷೆ
ಹೊಸದಿಲ್ಲಿ, ಜ.31: ಹೆಚ್ಚುತ್ತಿರುವ ಆಹಾರ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡಬೇಕಿದೆ ಮತ್ತು ಸರಕಾರವು ಪಡಿತರ ಸಾಮಗ್ರಿಗಳ ಬೆಲೆಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿಯು ಹೇಳಿದೆ.
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್‌ಎಫ್‌ಎಸ್‌ಎ)ಯಂತೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮೂಲಕ ನ್ಯಾಯಬೆಲೆ ಅಂಗಡಿಗಳ ಮೂಲಕ ಅತ್ಯಂತ ಹೆಚ್ಚಿನ ಸಬ್ಸಿಡಿ ದರಗಳಲ್ಲಿ ಅಕ್ಕಿ, ಗೋಧಿ ಇತ್ಯಾದಿ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ.
ಬಹುಸಂಖ್ಯಾಕರು ಬಡವರಾಗಿರುವುದರಿಂದ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳುವುದು ಈಗಲೂ ಸವಾಲಾಗಿಯೇ ಉಳಿದಿದೆ. ಎನ್‌ಎಫ್‌ಎಸ್‌ಎ ಅಡಿ ಆರಂಭದಲ್ಲಿ ಮೂರು ವರ್ಷಗಳ ಅವಧಿಗೆ ನಿಗದಿಗೊಳಿಸಲಾಗಿದ್ದ ಪಡಿತರ ಸಾಮಗ್ರಿಗಳ ಬೆಲೆಗಳನ್ನು 2013ರಿಂದ ಪರಿಷ್ಕರಿಸಲಾಗಿಲ್ಲ,ಇದರಿಂದಾಗಿ ಸಬ್ಸಿಡಿ ಮೊತ್ತ ಹೆಚ್ಚುತ್ತಲೇ ಇದೆ. ಎನ್‌ಎಫ್‌ಎಸ್‌ಎ ಅಡಿ ಬೆಲೆಗಳು ಮತ್ತು ಪಡಿತರ ವ್ಯಾಪ್ತಿಯನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ ಎಂದಿರುವ ಸಮೀಕ್ಷೆಯು, 2014-15ರಲ್ಲಿ 1,13,171.2 ಕೋ.ರೂ.ಗಳಷ್ಟಿದ್ದ ಆಹಾರ ಸಬ್ಸಿಡಿ ಮೊತ್ತವು 2018-19ರಲ್ಲಿ 1,71,127.5 ಕೋ.ರೂ.ಗೇರಿದೆ. ಇದಕ್ಕೆ ಆರ್ಥಿಕ ವೆಚ್ಚ ಏರಿಕೆ,ಬೆಲೆ ಪರಿಷ್ಕರಣೆ ಮಾಡದಿರುವುದು ಸೇರಿದಂತೆ ಹಲವು ಕಾರಣಗಳಿವೆ ಎಂದು ತಿಳಿಸಿದೆ.







