ಪ್ರಪ್ರಥಮ ಮಹಿಳಾ ಡಿಜಿ ಸೇರಿ ಮೂವರಿಗೆ ಆತ್ಮೀಯ ಬೀಳ್ಕೊಡುಗೆ

ಬೆಂಗಳೂರು, ಜ.31: ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಸೇರಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ಶುಕ್ರವಾರ ವೃತ್ತಿಯಿಂದ ನಿವೃತ್ತರಾದರು.
ಇಲ್ಲಿನ ಕೋರಮಂಗಲದ ಕೆಎಸ್‌ಆರ್ಪಿ ಮೈದಾನದಲ್ಲಿ ಪೊಲೀಸ್ ಫೇರ್‌ವೆಲ್ ಪೆರೇಡ್ ನಡೆಸುವ ಮೂಲಕ ಗೌರವ ಸಲ್ಲಿಸಿ ನೀಲಮಣಿ ಎನ್.ರಾಜು, ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ ಹಾಗೂ ರಾಜ್ಯ ಪೊಲೀಸ್ ವಸತಿ ಮೂಲ ಸೌಕರ್ಯ ನಿಗಮದ ಡಿಜಿಪಿ ರಾಘವೇಂದ್ರ ಔರಾದ್ಕರ್ ಅವರನ್ನು ಬೀಳ್ಕೊಡಲಾಯಿತು.
ಕರ್ನಾಟಕ ಕೇಡರ್‌ನ 1983ನೇ ಐಪಿಎಸ್ ಅಧಿಕಾರಿಯಾಗಿರುವ ನೀಲಮಣಿ ಎನ್. ರಾಜು ಉತ್ತರಾಖಂಡ್ ಮೂಲದವರಾಗಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಹಾಗೂ ಕೇಂದ್ರ ಸರಕಾರದ ಸೇವೆಯಲ್ಲಿ 23 ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರಾಗಿ ಆಯ್ಕೆಯಾದರು. ನೀಲಮಣಿ ಎನ್.ರಾಜು ಅವರು ರಾಜ್ಯದ ಪ್ರಥಮ ಮಹಿಳಾ ಡಿಜಿಪಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಎಂ.ಎನ್.ರೆಡ್ಡಿ: ಆಂಧ್ರಪ್ರದೇಶದ ಅನಂತಪುರ ಮೂಲದ 1984ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಎಂ.ಎನ್.ರೆಡ್ಡಿ ಅವರು, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಅಗ್ನಿಶಾಮಕ ದಳದ ಡಿಜಿಪಿ ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಸಂಚಾರ ವಿಭಾಗದಲ್ಲಿ ಅಧಿಕಾರಿಯಾಗಿದ್ದ ವೇಳೆ ಎಂ.ಎನ್.ರೆಡ್ಡಿ ಅವರು, ಬಿ ಟ್ರ್ಯಾಕ್ ಯೋಜನೆಯನ್ನು ಪರಿಚಯಿಸಿದರು.
ರಾಘವೇಂದ್ರ ಔರಾದ್ಕರ್: ಕರ್ನಾಟಕದ ಬೀದರ್ ಜಿಲ್ಲೆಯ ರಾಘವೇಂದ್ರ ಔರಾದ್ಕರ್ 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಬಹಳ ವರ್ಷಗಳ ನಂತರ ಪೊಲೀಸರ ವೇತನಗಳ ಪರಿಷ್ಕರಣೆ ಪ್ರಸ್ತಾವನೆ ಬಂದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ, ಅಧ್ಯಯನ ನಡೆಸಿ ಸೂಕ್ತ ವರದಿ ನೀಡುವಂತೆ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿಗೆ ರಾಘವೇಂದ್ರ ಔರಾದ್ಕರ್ ಅವರನ್ನು ನೇಮಿಸಲಾಗಿತ್ತು.
ಸರಕಾರ ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ರಾಘವೇಂದ್ರ ಔರಾದ್ಕರ್ ಅವರು ಕೆಲಸ ಮಾಡಿದ್ದರು. ಇತರೆ ರಾಜ್ಯಗಳಲ್ಲಿನ ಪೊಲೀಸರ ವೇತನ, ಕರ್ತವ್ಯದ ಮಾದರಿ ಸೇರಿದಂತೆ ಹಲವಾರು ವಿಷಯಗಳನ್ನು ಪರಿಶೀಲಿಸಿ ಸಮಗ್ರ ವರದಿ ನೀಡಿದರು. ವರದಿಯಲ್ಲಿ ಅಂಶಗಳು ಸಂಪೂರ್ಣವಾಗಿ ಜಾರಿಯಾಗದೇ ಇದ್ದರೂ ಪೊಲೀಸ್ ಸಿಬ್ಬಂದಿಗಳ ಪಾಲಿಗೆ ಅದು ಆಶಾಕಿರಣವಾಗಿದೆ.
2013ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಒಂದು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಪೊಲೀಸ್ ವಸತಿ ನಿಗಮದಲ್ಲಿ ಡಿಜಿಪಿಯಾಗಿದ್ದ ಅವರು ಶುಕ್ರವಾರ ನಿವೃತ್ತಿಯಾದರು.
ಪ್ರತಿಯೊಬ್ಬರು ಕೊಡುಗೆ ನೀಡಬೇಕು
ಪೊಲೀಸ್ ಕರ್ತವ್ಯ ಎನ್ನುವುದು ಒಂದು ಜವಾಬ್ದಾರಿಯಾಗಿದೆ. ಹಾಗಾಗಿ, ಪೊಲೀಸ್ ಪೇದೆಯಿಂದ ಹಿಡಿದು, ಇಲಾಖೆಯ ಪ್ರತಿಯೊಬ್ಬರು ದೇಶಕ್ಕೆ, ರಾಜ್ಯಕ್ಕೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಕೊಡುಗೆ ನೀಡಬೇಕು.
-ನೀಲಮಣಿ ಎನ್.ರಾಜು
ಜಾರಿ ಆಗುವ ಆತ್ಮವಿಶ್ವಾಸ
ಪೊಲೀಸ್ ಸಿಬ್ಬಂದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಒಂದು ವರದಿ ತಯಾರಿಸಿದೆ ಎನ್ನುವ ಬಹು ದೊಡ್ಡ ಅಂಶ ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿ ಇರುತ್ತದೆ. ಈ ವರದಿಯಲ್ಲಿನ ಅಂಶಗಳು ಹಂತ ಹಂತವಾಗಿ ಜಾರಿಯಾಗುವ ಆತ್ಮವಿಶ್ವಾಸ ಇದೆ.
-ರಾಘವೇಂದ್ರ ಔರಾದ್ಕರ್
ಪೊಲೀಸ್ ಸಿಬ್ಬಂದಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಜನರ ಬಳಿಯೂ ಪೊಲೀಸ್ ಬಿಟ್ಟು ಬೇರೆ ಆಯ್ಕೆ ಇಲ್ಲ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಲಿ.
-ಎಂ.ಎನ್.ರೆಡ್ಡಿ







