ಉಡುಪಿ: ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆಯಿಂದ ಪ್ರತಿಭಟನೆ

ಉಡುಪಿ, ಜ.31: ವೇತನ ಪರಿಷ್ಕರಣೆ, ಸಮಾನ ಪಿಂಚಣಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ಯೂನಿಯನ್ ಗಳ ಸಂಯುಕ್ತ ವೇದಿಕೆ ನೀಡಿದ ಎರಡು ದಿನಗಳ ದೇಶವ್ಯಾಪ್ತಿ ಮುಷ್ಕರದ ಕರೆಯಂತೆ ಇಂದು ಉಡುಪಿಯಲ್ಲಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ನೌಕರರು ಮುಷ್ಕರ ನಡೆಸಿದರು.
ಈ ಪ್ರಯುಕ್ತ ಉಡುಪಿಯ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಉಡುಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಬೆಳಗ್ಗೆ ಪ್ರತಿಭಟನಾ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಸರಕಾರ, ಹಣಕಾಸು ಸಚಿವರು, ಐಬಿಎಗಳ ಧೋರಣೆಯನ್ನು ಖಂಡಿಸಿ ಪ್ರತಿಭಟನಕಾರರು ಘೋಷಣೆ ಗಳನ್ನು ಕೂಗಿದರು.
ಶೀಘ್ರವೇ ವೇತನ ಪರಿಷ್ಕರಣೆ, ಸಮಾನ ಹಾಗೂ ಸುಧಾರಿತ ಕುಟುಂಬ ಪಿಂಚಣಿ ಯೋಜನೆ, ಅಲ್ಲದೇ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಎರಡು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿತ್ತು. ಬ್ಯಾಂಕ್‌ಗಳ ಅಧಿಕಾರಿ ವರ್ಗವೂ ಈ ಮುಷ್ಕರದ ಕರೆಗೆ ಪೂರಕವಾಗಿ ಸ್ಪಂಧಿಸಿದೆ.
ಅಲ್ಲದೇ ಕೇಂದ್ರ ಸರಕಾರ ಇತ್ತೀಚೆಗೆ ತೆಗೆದುಕೊಂಡ ಬ್ಯಾಂಕುಗಳ ವಿಲೀನೀಕರಣದ ತಪ್ಪು ನಿರ್ಣಯ ಹಾಗೂ 2017ರಿಂದಲೇ ಬಾಕಿ ಉಳಿದಿ ರುವ ವೇತನ ಪರಿಷ್ಕರಣೆ ಬಗ್ಗೆ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಸಭೆಯಲ್ಲಿ ಮಾತನಾಡಿದ ಎಲ್ಲಾ ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು.
ಹಳೆವೇತನ ಒಪ್ಪಂದ 2017ಕ್ಕೆ ಮುಗಿದಿದೆ. ಅನಂತರ ನಡೆದ ವೇತನ ಒಪ್ಪಂದದ ಮಾತುಕತೆ ಎರಡು ವರ್ಷಗಳಿಂದ ವಿಫಲವಾಗುತ್ತಿದೆ. ಹೀಗಾಗಿ ವೇತನ ಹೆಚ್ಚಳವೂ ಸೇರಿದಂತೆ ತಮ್ಮ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಈ ಮುಷ್ಕರದ ಕರೆಯನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.
ತಮ್ಮ ಭವಿಷ್ಯದ ದೃಷ್ಟಿಯಿಂದ ಯುವಕರು ಇಂಥ ಹೋರಾಟಗಳಲ್ಲಿ ತುಂಬಾ ಮುತುವರ್ಜಿಯಿಂದ ಭಾಗವಹಿಸಬೇಕು, ಇದರ ನೇತೃತ್ವ ವಹಿಸಿಕೊಳ್ಳಬೇಕು. ಈ ಪ್ರತಿಭಟನೆಗೂ ಬಗ್ಗದಿದ್ದರೆ ಮಾರ್ಚ್ ತಿಂಗಳಲ್ಲಿ ಮತ್ತೆ ಮೂರು ದಿನಗಳ ಮುಷ್ಕರ ನಡೆಸಲಿದ್ದೇವೆ ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಎಐಬಿಓಸಿ ಮುಖಂಡ ಶಶಿಧರ ಶೆಟ್ಟಿ, ಎಐಬಿಓಎಯ ರವಿಶಂಕರ್, ಎನ್‌ಸಿಬಿಇಯ ಸುಪ್ರಿಯಾ, ಎಐಬಿಇಎಯ ನಾಗೇಶ್ ನಾಯಕ್, ಬಿಇಎಫ್‌ಐನ ರವೀಂದ್ರ, ನಿತ್ಯಾನಂದ, ವಿವಿಧ ಬ್ಯಾಂಕ್ ಸಂಘಟನೆಗಳ ನಾಯಕರಾದ ಬಾಲಗಂಗಾಧರ ರಾವ್, ರಮೇಶ್, ವರದ ರಾಜ್, ಚಂದ್ರಕಾಂತ್, ವಿನೋಜ್ ನಜ್ರತ್, ಅಶೋಕ್ ಕೋಟ್ಯಾನ್, ಹೇಮಂತ್ ಯು.ಕಾಂತ್, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ನಿವೃತ್ತ ಬ್ಯಾಂಕ್ ನೌಕರರ ಸಂಘದ ಶಿವರಾಯ ಯು., ಅಲ್ಲದೇ ಜಯನ್ ಮಲ್ಪೆ, ರಮೇಶ್, ಮನೋಜ್, ಸುರೇಖಾ, ವಿಜಯ್ ಆಚಾರ್ಯ ಮುಂತಾದವರು ಭಾಗವಹಿಸಿದ್ದರು.










