ಮಂಗಗಳು ಸಾವನ್ನಪ್ಪಿದರೆ ಶೀಘ್ರ ವರದಿಗೆ ಸಿಇಒ ಸೂಚನೆ

ಮಂಗಳೂರು, ಜ.31: ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಮಂಗಗಳು ಸಾವನ್ನಪ್ಪಿದರೆ ಶೀಘ್ರವಾಗಿ ವರದಿ ನೀಡಿ ಎಂದು ದ.ಕ.ಜಿಪಂ ಸಿಇಒ ಸೆಲ್ವಮಣಿ ಆರ್. ಸೂಚನೆ ನೀಡಿದ್ದಾರೆ.
ದ.ಕ.ಜಿಪಂ ಕಾನ್ಫೆರೆನ್ಸ್ ಹಾಲ್‌ನಲ್ಲಿ ಗುರುವಾರ ನಡೆದ ಮಂಗನಕಾಯಿಲೆ (ಕ್ಯಾಸನೂರು ಕಾಡಿನ ಕಾಯಿಲೆ-ಕೆ.ಫ್.ಡಿ) ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳ ಕುರಿತು ದ.ಕ. ಜಿಲ್ಲೆಯ ಅಂತರ್ ಇಲಾಖಾ ಸಮನ್ವಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಂಗನ ಕಾಯಿಲೆಗೆ ಸಂಬಂಧಪಟ್ಟಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಕ್ಕೆ ಬೇಕಾದ ಔಷಧಿಗಳನ್ನು ದಾಸ್ತಾನು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಎಲ್ಲಾ ಗ್ರಾಪಂ ಗಳಲ್ಲಿ ಸಭೆ ಏರ್ಪಡಿಸಿ ಈ ರೋಗದ ಕುರಿತು ಅರಿವು ಮೂಡಿಸಲು ಹಾಗೂ ತಾಲೂಕು ಮಟ್ಟದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಷಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಅಧೀಕ್ಷಕ ಡಾ. ಜೆಸಿಂತಾ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





