ಆ್ಯಸಿಡ್ ಸಂತ್ರಸ್ತೆಗೆ ಗರಿಷ್ಠ ಪ್ರಮಾಣದ ಪರಿಹಾರ: ಆಸ್ಪತ್ರೆಗೆ ಭೇಟಿ ನೀಡಿ ಭರವಸೆ ನೀಡಿದ ಉಸ್ತುವಾರಿ ಸಚಿವ ಕೋಟ
ಮಂಗಳೂರು, ಜ.31: ಪತಿಯ ಅಣ್ಣನಿಂದಲೇ ಆ್ಯಸಿಡ್ ದಾಳಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ತಾಲೂಕಿನ ಕೊಡಿಯಂಬಾಲ ಗ್ರಾಮದ ವಿಧವೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಂತ್ರಸ್ತೆಗೆ ಗಂಭೀರ ಗಾಯವಾಗಿದೆ. ಎಡಗಣ್ಣಿನ ದೃಷ್ಠಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. 3-4 ದಿನದಲ್ಲಿ ಮುಖ್ಯಮಂತ್ರಿ ನಿಧಿಯಿಂದ ಗರಿಷ್ಠ ಪ್ರಮಾಣದ ಪರಿಹಾರವನ್ನು ಕೊಡಿಸುತ್ತೇನೆ ಎಂದರು.
ಈಗಾಗಲೇ ಆಸ್ಪತ್ರೆಯ ಅಧಿಕಾರಿಗೆ ತೀವ್ರ ನಿಗಾ ವಹಿಸಲು ಸೂಚಿಸಿದ್ದೇನೆ. ಸಂತ್ರಸ್ತೆಗೆ ಮೂರು ಹೆಣ್ಣು ಮಕ್ಕಳಿದೆ. ಆ ಪೈಕಿ ಮೂರನೆ ಮಗಳಿಗೆ ಕೂಡ ಆ್ಯಸಿಡ್ ಬಿದ್ದಿದೆ. ಆಕೆ ಇದೀಗ ಚೇತರಿಸಿಕೊಂಡಿದ್ದಾಳೆ. ಸಂತ್ರಸ್ತೆಯು ಮರಳಿ ಮನೆಗೆ ಹೋಗಲು ಭಯಪಡುತ್ತಿದ್ದಾರೆ. ಆಕೆಗೆ ಜಮೀನು ಗುರುತಿಸಿ ಸರಕಾರದ ವತಿಯಿಂದ ಮನೆ ನಿರ್ಮಿಸಿಕೊಡಲಾಗುವುದು ಎಂದು ಕೋಟ ತಿಳಿಸಿದರು.
ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ವೆನ್ಲಾಕ್ ಅಧೀಕ್ಷಕಿ ರಾಜೇಶ್ವರಿದೇವಿ ಮತ್ತಿತರರು ಉಪಸ್ಥಿತರಿದ್ದರು
*ನನ್ನ ಪತಿ ನಿಧನರಾಗಿ 1 ವರ್ಷ 2 ತಿಂಗಳಾಗಿದೆ. ಪತಿಯ ಅಣ್ಣ ನನಗೆ ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ. ಈ ಬಗ್ಗೆ ವರ್ಷದ ಹಿಂದೆಯೇ ಪುತ್ತೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದೆ. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಬೇಡ. ನಿನ್ನ ಹೆಣ್ಮಕ್ಕಳ ಮದುವೆ ಸಂದರ್ಭ ಸಮಸ್ಯೆಯಾಗಬಹುದು ಎಂದು ನನ್ನನ್ನು ಹೆದರಿಸಿದರು. ಅಲ್ಲದೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆ್ಯಸಿಡ್ ಸಂತ್ರಸ್ತೆ ದೂರಿದರು.
ಜ.24ರಂದು ಸಂಜೆ 4 ಗಂಟೆಗೆ ಆ್ಯಸಿಡ್ ದಾಳಿ ನಡೆದ ಕೂಡಲೇ ಪೊಲೀಸರಿಗೆ ಕರೆಮಾಡಿ ತಿಳಿಸಿದೆ. ಅವರು ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದರು, ನಾನು ನನ್ನ ಮೂರು ಮಕ್ಕಳೊಂದಿಗೆ 1.5 ಕಿ.ಮಿ ನಡೆದುಕೊಂದು ಅಲ್ಲಿಂದ ರಿಕ್ಷಾದಲ್ಲಿ ಠಾಣೆಗೆ ಹೋದೆ. ಬಳಿಕ ಪೊಲೀಸ್ ವಾಹನದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಪುತ್ತೂರು ಆಸ್ಪತ್ರೆಯಿಂದ ಮಂಗಳೂರಿಗೆ ಕಳುಹಿಸುವಾಗ ನನ್ನೊಂದಿಗೆ ನನ್ನ ಮಕ್ಕಳಲ್ಲದೆ ಬೇರೆ ಯಾರೂ ಇರಲಿಲ್ಲ. ರಾತ್ರಿ 10 ಗಂಟೆಗೆ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದು, ಮರುದಿನ ಬೆಳಗ್ಗೆ 9:30ಕ್ಕೆ ಕಡಬ ಪೊಲೀಸ್ ಬಂದು ನನ್ನೊಂದಿಗೆ ಏನನ್ನೂ ಕೇಳದೆ ಜಮೀನಿನ ವಿಚಾರದಲ್ಲಿ ಗಲಾಟೆ ಆಗಿದೆ ಎಂದು ಬರೆದುಕೊಂಡಿದ್ದಾರೆ ಎಂದು ದೂರಿದರು.







