ಚೀನಾದಲ್ಲಿರುವ ಪಾಕ್ ನಾಗರಿಕರ ತೆರವು ಇಲ್ಲ: ಪಾಕ್ ಘೋಷಣೆ

ಇಸ್ಲಾಮಾಬಾದ್, ಜ.31: ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿರುವ ತನ್ನ ‘ಸಾರ್ವಕಾಲಿಕ ಸ್ನೇಹಿತ ಚೀನಾ’ದ ಜೊತೆ ಏಕತೆಯನ್ನು ಪ್ರದರ್ಶಿಸುವ ಸಂಕೇತವಾಗಿ, ಈ ಭೀಕರ ಸೋಂಕು ರೋಗದ ಕೇಂದ್ರಬಿಂದುವಾದ ವುಹಾನ್ ನಗರದಲ್ಲಿರುವ ತನ್ನ ದೇಶದ ನಾಗರಿಕರನ್ನು ತೆರವುಗೊಳಿಸದಿರಲು ಪಾಕಿಸ್ತಾನವು ಶುಕ್ರವಾರ ನಿರ್ಧರಿಸಿದೆ.
‘‘ಚೀನಾದಲ್ಲಿರುವ ನಮ್ಮ ಪ್ರೀತಿಪಾತ್ರರ ಹಿತಾಸಕ್ತಿಯ ದೃಷ್ಟಿಯಿಂದ,ಈ ಪ್ರದೇಶ, ಜಗತ್ತು ಮತ್ತು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನಾವು ನಮ್ಮ ಪ್ರಜೆಗಳನ್ನು ತೆರವುಗೊಳಿಸುವುದಿಲ್ಲ’’ ಎಂದು ಪಾಕಿಸ್ತಾನದ ಆರೋಗ್ಯ ವಿಷಯಗಳ ಕುರಿತ ಪ್ರಧಾನಿಯವರ ವಿಶೇಷ ಸಹಾಯಕ ಡಾ.ಝಫರ್ ಮಿರ್ಝಾ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು ಎಚ್‌ಓ)ಯ ಶಿಫಾರಸಿಗೆ ಅನ್ವಯವಾಗಿ ಪಾಕಿಸ್ತಾನವು ಚೀನಾದಲ್ಲಿರುವ ತನ್ನ ಪ್ರಜೆಗಳನ್ನು ತೆರವುಗೊಳಿಸದಿರಲು ನಿರ್ಧರಿಸಿದೆಯೆಂದು ಅವರು ತಿಳಿಸಿದ್ದಾರೆ.
‘‘ಸದ್ಯಕ್ಕೆ ಚೀನಾ ಸರಕಾರವು ವೂಹಾನ್ ನಗರದಲ್ಲಿ ಈ ಸೋಂಕು ರೋಗವನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ. ಒಂದು ವೇಳೆ ನಾವು ಬೇಜವಾಬ್ದಾರಿಯಿಂದ ವರ್ತಿಸಿದಲ್ಲಿ ಹಾಗೂ ಅಲ್ಲಿಂದ ಜನರನ್ನು ತೆರವುಗೊಳಿಸಲು ಆರಂಭಿಸಿದಲ್ಲಿ ಈ ಸೋಂಕು ರೋಗವು ಕಾಡ್ಗಿಚ್ಚಿನಂತೆ ಎಲ್ಲೆಡೆಯೂ ಹರಡಲಿದೆ’’ ಎಂದು ಮಿರ್ಝಾ ತಿಳಿಸಿದ್ದಾರೆ.
ಚೀನಾದಲ್ಲಿರುವ ನಾಲ್ವರು ಪಾಕಿಸ್ತಾನಿ ವಿದ್ಯಾರ್ಥಿಗಳು ಕೊರೋನ ಸೋಂಕು ಪೀಡಿತರಾಗಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆಯೆಂದು ಅವರು ತಿಳಿಸಿದರು.
ಬ್ರಿಟನ್‌ನಲ್ಲಿ ಇಬ್ಬರಿಗೆ ಕೊರೊನ್ ವೈರಸ್ ದೃಢ
ನೊವೆಲ್ ಕೊರೋನ ವೈರಸ್ ಸೋಂಕಿಗೆ ಬ್ರಿಟನ್‌ನಲ್ಲಿ ಇಬ್ಬರು ಬಾಧಿತರಾಗಿದ್ದಾರೆಂದು ಬ್ರಿಟಿಶ್ ಸರಕಾರ ದೃಢಪಡಿಸಿದೆ. ಬ್ರಿಟನ್‌ನಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ವೈದ್ಯಕೀಯವಾಗಿ ದೃಢೀಕರಣಗೊಂಡಿರುವುದು ಇದೇ ಮೊದಲ ಸಲವಾಗಿದೆ.







